ಬೆಳಗಾವಿ : ಮಹಾರಾಷ್ಟ್ರ ಏಕೀಕರಣ ಸಮಿತಿಯ ‘ಮಹಾಮೇಳ’ ಕ್ಕೆ ಅನುಮತಿ ನಿರಾಕರಿಸುವ ಮೂಲಕ ರಾಜ್ಯದ ಇತಿಹಾಸದಲ್ಲೇ ಬಸವರಾಜ ಬೊಮ್ಮಾಯಿ ಸರಕಾರ ಸ್ತುತ್ಯ ಕಾರ್ಯ ಮಾಡಿದೆ.
ಕಳೆದ ವಾರ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದ ಸಮಿತಿಗೆ ಸೋಮವಾರದ ವರೆಗೂ ಯಾವುದೇ ಕ್ರಮ ಜರುಗಿದ ಕುರಿತು ಮಾಹಿತಿಯಿರಲಿಲ್ಲ. ಪ್ರತಿ ಬಾರಿಯಂತೆ ಈ ಬಾರಿಯೂ ಮಹಾಮೇಳಕ್ಕೆ ಅನುಮತಿ ಸಿಗುವುದೆಂದು ಎಂಇಎಸ್ ಸಭೆಗೆ ವೇದಿಕೆ ನಿರ್ಮಿಸಿ ಸಕಲ ವ್ಯವಸ್ಥೆ ಮಾಡಿಕೊಂಡಿತ್ತು. ಆದರೆ ಸೋಮವಾರ ಮುಂಜಾನೆ ಅನುಮತಿ ನೀಡಿಲ್ಲ ಎಂಬ ಮಾಹಿತಿ ನೀಡಲಾಯಿತು.
ವಿಧಾನ ಮಂಡಲ ಚಳಿಗಾಲ ಅಧಿವೇಶನದಂದು ಕರ್ನಾಟಕ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮತ್ತು ಕರ್ನಾಟಕ ವಿರೋಧಿ ಭಾಷಣ ಬಿಗಿಯಲು ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಮರಾಠಿ ಮಹಾಮೇಳಕ್ಕೆ ಕೊನೆ ಘಳಿಗೆಯಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದು, ಇಂದು ನಡೆಯಬೇಕಿದ್ದ ನಾಡವಿರೋಧಿ ಮಹಾಮೇಳ ರದ್ದುಗೊಂಡಿದೆ.
ನಗರದ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಹಾಮೇಳದ ವೇದಿಕೆಯನ್ನು ತೆರವುಗೊಳಿಸಲಾಯಿತು. ಎಡಿಜಿಪಿ ಅಲೋಕ ಕುಮಾರ ಹಾಗೂ ಬೆಳಗಾವಿ ನಗರ ಡಿಸಿಪಿ ರವೀಂದ್ರ ಗಡಾದಿ ಸ್ಥಳಕ್ಕೆ ಭೇಟಿ ನೀಡಿ ವೇದಿಕೆಯನ್ನು ತೆರವುಗೊಳಿಸಿದರು. ಯಾವುದೇ ಸಭೆ ಸಮಾರಂಭ ಆಯೋಜಿಸದಂತೆ ತಾಕೀತು ಮಾಡಿದರು. ನಗರದ ಹಲವು ಪ್ರದೇಶಗಳಲ್ಲಿ ಸೋಮವಾರ ಕಲಾಂ 144 ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಸಭೆ, ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ. ಹೀಗಾಗಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಕ್ಕೆ ತಡೆ ಬಿದ್ದಂತಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ ಕುಮಾರ ಅವರು, ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಮರಾಠಿ ಮೇಳ ಆಯೋಜಿಸಲು ನಿರ್ಧರಿಸಿದ್ದರು. ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ತಡೆಯಲು ಈ ಮೇಳಕ್ಕೆ ಅನುಮತಿ ನಿರಾಕರಿಸಲಾಗಿದೆ. ಅನುಮತಿ ಕೋರಿ ಎಂಇಎಸ್ ಮುಖಂಡರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದರು.
ಕನ್ನಡಿಗರ ವಿರೋಧದ ನಡುವೆಯೂ ಎಂಇಎಸ್ ಗೆ ಕೊನೆ ಘಳಿಗೆಯಲ್ಲಿ ಸರಕಾರ ಅನುಮತಿ ನೀಡುತ್ತಿತ್ತು, ವಿಧಿಸಿದ ಕಟ್ಟಲೆಗಳನ್ನು ಮೀರಿ, ಕರ್ನಾಟಕ ವಿರೋಧಿ ಚಟುವಟಿಕೆಗಳು ಪ್ರತಿವರ್ಷ ನಡೆದರೂ ಯಾವುದೇ ಕ್ರಮ ಜರುಗಿಸುತ್ತಿರಲಿಲ್ಲ. ಆದರೆ ಮೊದಲ ಭಾರಿ ಅನುಮತಿ ನಿರಾಕರಿಸುವ ಮೂಲಕ ಸರಕಾರ ಬದ್ಧತೆ ತೋರಿಸಿದೆ.