ಬೆಳಗಾವಿ, ೫: ಯಾವುದೇ ಶಾಸನಬದ್ಧ ಹುದ್ದೆಯಿಲ್ಲದೇ ದಶಕ ಕಳೆದಿರುವ ಚಿಕ್ಕೋಡಿಯ ಮಾಜಿ ಸಂಸದ ರಮೇಶ ಕತ್ತಿ ಅವರು ತಮಗೆ ಬಿಜೆಪಿಯಲ್ಲಿ ಭವಿಷ್ಯವಿಲ್ಲವೆಂದು ಮನಗೊಂಡು ಕಾಂಗ್ರೆಸ್ ಸೇರಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರ ಕಾಂಗ್ರೆಸ್ ಸೇರ್ಪಡೆ ಷರತ್ತುಬದ್ಧವಾಗಿದ್ದು “ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್ ಸೇರುವುದು” ಎಂದು ಅವರು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಚಿಕ್ಕೋಡಿಯಿಂದ ಮರುಸ್ಪರ್ಧೆ ಬಯಸಿ ಬಿಜೆಪಿ ಹೈಕಮಾಂಡ್ ಬಳಿ ತೆರಳಿದ್ದ ಕತ್ತಿ ಅವರಿಗೆ “ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಮುಂದುವರೆಸಲಾಗುವುದು, ಅವರನ್ನು ಬದಲಾಯಿಸಲು ಯಾವುದೇ ಸೂಕ್ತ ಕಾರಣಗಳಿಲ್ಲ” ಎಂದು ತಿಳಿಸಲಾಗಿತ್ತು.
ನಿಪ್ಪಾಣಿಯ ಜೊಲ್ಲೆ ಕುಟುಂಬವು ದೆಹಲಿ ಮತ್ತು ನಾಗಪುರ ನಾಯಕರ ಜೊತೆ ಉತ್ತಮ ಸಂಪರ್ಕ ಹೊಂದಿದೆ ಎಂಬ ಅರಿವಿರುವ ಕತ್ತಿ ಅವರು ಚಿಕ್ಕೋಡಿಯ ಆಸೆ ಬಿಟ್ಟಿದ್ದು ಬೆಳಗಾವಿ ಕಡೆ ತಮ್ಮ ಸಂಪೂರ್ಣ ಗಮನ ಹರಿಸಿದ್ದಾರೆ. ಜೊಲ್ಲೆ ಅವರ ದೆಹಲಿ ಮುಖಂಡರ ಸಂಪರ್ಕದ ಕುರಿತು ಹೇಳುವುದಾದರೆ, ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಪತ್ನಿ ಶಶಿಕಲಾ ಜೊಲ್ಲೆ ಅವರು ಯಡಿಯೂರಪ್ಪ ಸರಕಾರದಲ್ಲಿ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಗರ್ಭಿಣಿ ಮಹಿಳೆಯರು ಮತ್ತು ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುವ ಗುತ್ತಿಗೆಗೆ ಸಂಬಂಧಿಸಿದಂತೆ ಅವರು ಕೋಟ್ಯಾಂತರ ರೂಪಾಯಿಗಳ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಅದಕ್ಕಾಗಿ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಅವರಿಗೆ ಯಾವುದೇ ಸಚಿವ ಸ್ಥಾನ ನೀಡದಿರಲೂ ಸಹ ನಿರ್ಧರಿಸಲಾಗಿತ್ತು.
ಇಷ್ಟಾಗಿಯೂ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಮತ್ತು ಅವರ ಸಂಪುಟದ ಸದಸ್ಯರಾಗಿ ಕೆಲವರು ರಾಜಭವನದಲ್ಲಿ ಅಧಿಕಾರ ಸ್ವೀಕರಿಸುವ ಒಂದು ತಾಸು ಮೊದಲು ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ನಿಯೋಜಿತ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಕರೆ ಮಾಡಿ ಶಶಿಕಲಾ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆದೇಶಿಸಿದ್ದರು. ಆಗ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಬೆಂಗಳೂರು ತಲುಪಿದ್ದ ಜೊಲ್ಲೆ ದಂಪತಿಗಳು, ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರತಿಜ್ಞಾವಿಧಿ ಸ್ವೀಕರಿಸುವುದಕ್ಕಾಗಿ ‘ಜೀರೋ ಟ್ರಾಫಿಕ್ʼ ಮಾಡಿಸಿ, ರಾಜಭವನಕ್ಕೆ ಸಮಯಕ್ಕೆ ಸರಿಯಾಗಿ ತಲುಪಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕೇಂದ್ರದ ಉನ್ನತ ನಾಯಕರೊಂದಿಗೆ ಇಂಥ ಸಂಪರ್ಕ ಹೊಂದಿರುವ ಅಣ್ಣಾಸಾಹೇಬ ಜೊಲ್ಲೆಯವರನ್ನು ಸರಿಸಿ ತಾವು ಟಿಕೆಟ್ ಪಡೆಯುವುದು ಸಾಧ್ಯವಿಲ್ಲವೆಂದು ಕತ್ತಿ ಮನಗಂಡು ಚಿಕ್ಕೋಡಿಯ ಆಸೆಯನ್ನೇ ಬಿಟ್ಟು ಈಗ ಬೆಳಗಾವಿ ಕಡೆಗೆ ದೃಷ್ಟಿ ಹರಿಸಿದ್ದಾರೆ.
2014ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಸ್ಪರ್ಧೆಸಿ ಕಾಂಗ್ರೆಸ್ ನ ಪ್ರಕಾಶ ಹುಕ್ಕೇರಿಯವರಿಂದ ಪರಾಭವ ಮತ್ತು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸದಲಗಾದಿಂದ ಸ್ಪರ್ಧೆಸಿ ಪ್ರಕಾಶ ಹುಕ್ಕೇರಿಯವರ ಪುತ್ರ, ಶಾಸಕ ಗಣೇಶ ಹುಕ್ಕೇರಿಯವರಿಂದ ಸೋಲಿಸಲ್ಪಟ್ಟಿರುವ ರಮೇಶ ಕತ್ತಿ ಅವರು ಇನ್ನು ಬಿಜೆಪಿಯಲ್ಲಿ ಭವಿಷ್ಯವಿಲ್ಲವೆಂದು ಅರಿತು ಕಾಂಗ್ರೆಸ್ ಕಡೆ ದೃಷ್ಟಿ ಹರಿಸಿದ್ದಾರೆ. ಹಾಗಾಗಿ ಅವರು ಬಿಜೆಪಿಯ ಮಾಜಿ ಉಪಮುಖ್ಯಮಂತ್ರಿ, ಅಥಣಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರನ್ನು ಇತ್ತೀಚಿಗೆ ಭೆಟ್ಟಿಯಾಗಿ ತಮ್ಮ ವಿಚಾರ ಹೇಳಿಕೊಂಡಿದ್ದಾರೆ. ಆದರೆ ಸವದಿ ಅವರು ಯಾವುದೇ ಭರವಸೆ ನೀಡದಿದ್ದರೂ ಪಕ್ಷದ ಮುಖಂಡರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆನ್ನಲಾಗಿದೆ. ಕಾಂಗ್ರೆಸ್ ನಲ್ಲಿ ಬೆಳಗಾವಿಯಿಂದ ಸ್ಪರ್ಧಿಸಲು ಅನೇಕರು ಪ್ರಯತಿಸುತ್ತಿದ್ದು ಅವರಲ್ಲಿ ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಪುತ್ರ ಮೃನಾಲ್ ಪ್ರಮುಖರು ಎನ್ನಲಾಗುತ್ತಿದೆ.
“ರಮೇಶ ಕತ್ತಿ ಭೆಟ್ಟಿಯಾಗಿದ್ದು ನಿಜ. ರಾಜಕೀಯ ಅನಾಥ ಪ್ರಜ್ಞೆ ತುಂಬಾ ವೇದನೆ ಉಂಟು ಮಾಡುತ್ತದೆ. ಅಧಿಕಾರ ಅನುಭವಿಸಿದವರು ಹತ್ತು ವರ್ಷಗಳ ಕಾಲ ಯಾವುದೇ ಶಾಸನಬದ್ಧ ಹುದ್ದೆಯಲ್ಲಿರದಿರುವುದು ಮಾನಸಿಕ ಹಿಂಸೆಯುಂಟು ಮಾಡುತ್ತದೆ. ಚಿಕ್ಕೋಡಿಯಿಂದ ಬಿಜೆಪಿಯಲ್ಲಿ ಅವರಿಗೆ ಅವಕಾಶವಿಲ್ಲದಿರುವುದರಿಂದ ಅವರು ಕಾಂಗ್ರೆಸ್ ಸೇರಬಯಸಿ ನನ್ನ ಅಭಿಪ್ರಾಯ ಕೇಳಲು ಬಂದಿದ್ದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಅವರ ನಿರ್ಧಾರ ಸೂಕ್ತವಾದದ್ದು. ಆದರೆ ಅವರ ಷರತ್ತಿಗೆ ಹೈಕಮಾಂಡ್ ಒಪ್ಪುತ್ತೋ ಇಲ್ಲವೋ ಗೊತ್ತಿಲ್ಲ” ಎಂದು ಸವದಿ ತಿಳಿಸಿದ್ದು ಕತ್ತಿಯವರ ಇಚ್ಛೆ ಮತ್ತು ಷರತ್ತನ್ನು ವರಿಷ್ಠರಿಗೆ ತಿಳಿಸಿರುವುದಾಗಿಯೂ ಸವದಿ ತಿಳಿಸಿದರು.
“ಬೆಳಗಾವಿಯಿಂದ ಸ್ಪರ್ಧೆಸಲು ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್ ಗೆ ಬರುತ್ತೇನೆ” ಎಂದಿರುವ ಕತ್ತಿ ಅವರು, ಬೆಳಗಾವಿಯಿಂದ ಸ್ಪರ್ಧಿಸಿದರೆ ಗೆಲುವು ಸುಲಭವೆಂದು ಅರಿತುಕೊಂಡಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿರುವ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಅದರಲ್ಲಿ ನಾಲ್ಕು ಜನ ಲಿಂಗಾಯತ ಸಮುದಾಯದವರೇ ಆಗಿರುವುದರಿಂದ ಇಲ್ಲಿಂದ ಸ್ಪರ್ಧಿಸಿದರೆ ಗೆಲುವು ಖಚಿತವೆಂಬ ನಿರ್ಧಾರಕ್ಕೆ ಬಂದು ಕಾಂಗ್ರೆಸ್ ಸೇರಲು ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ (ಗ್ರಾಮೀಣ) ವಿನಯ ನಾವಲಗಟ್ಟಿ ಪ್ರತಿಕ್ರಿಯಿಸಿದ್ದು, ರಮೇಶ ಕತ್ತಿ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಪಕ್ಷ ಇನ್ನೂ ಬಲಿಷ್ಠವಾಗುತ್ತದೆ. ಅನೇಕ ನಿಷ್ಠಾವಂತ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅವರಿಗೆ ಚುನಾವಣಾ ರಾಜಕೀಯದಲ್ಲಿ ಆಸ್ಪದ ನೀಡುವುದು ನ್ಯಾಯಯುತವಾದದ್ದು. ಕೇವಲ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಪಕ್ಷಕ್ಕೆ ಆಗಮಿಸುವವರಿಗೆ ಆದ್ಯತೆ ನೀಡಿದರೆ, ಪಕ್ಷಕ್ಕಾಗಿ ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಕತ್ತಿ ಪಕ್ಷಕ್ಕೆ ಬಂದರೆ ಸ್ವಾಗತ. ಆದರೆ ಬೆಳಗಾವಿಯಿಂದ ಅವರ ಸ್ಪರ್ಧೆ ಕುರಿತು ಹೈಕಮಾಂಡ ಮಾತ್ರ ನಿರ್ಧರಿಸಲಿದೆ ಎಂದು ಹೇಳಿದರು.
ಇದಲ್ಲದೇ ಇನ್ನೂ ಬಿಜೆಪಿಯಲ್ಲಿಯೇ ಇರುವ ಕತ್ತಿ ಅವರು ಬಿಜೆಪಿಯಿಂದ ಬೆಳಗಾವಿಯಿಂದಲೂ ಸ್ಪರ್ಧಿಸಲು ಬಯಸಿದ್ದು ಕಳೆದ ವಾರ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ, ಗೋಕಾಕ ಶಾಸಕ ರಮೇಶ ಜಾರಕಿಹೊಳಿಯವರನ್ನೂ ಭೇಟಿಯಾಗಿದ್ದರು. ಬೆಳಗಾವಿ ಬಿಜೆಪಿ ಸಂಸದೆ ಮಂಗಳಾ ಅಂಗಡಿ ಮತ್ತೊಂದು ಅವಧಿಗೆ ಸ್ಪರ್ಧಿಸಲು ಆಸಕ್ತಿಯಿಲ್ಲವೆಂದು ಕೆಲವು ತಿಂಗಳ ಹಿಂದೆ ನೀಡಿರುವ ಹೇಳಿಕೆ ಹಿನ್ನಲೆಯಲ್ಲಿ ಆ ಸ್ಥಾನದ ಮೇಲೂ ಕತ್ತಿ ಕಣ್ಣು ಹಾಕಿದ್ದಾರೆ.
ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಈ ಕುರಿತು ಪ್ರತಿಕ್ರಿಯೆ ನೀಡಿ, “ರಮೇಶ ಕತ್ತಿ ಒಬ್ಬ ಬಿಜೆಪಿಯ ಪ್ರಭಾವಿ ನಾಯಕ. ಬೆಳಗಾವಿ ಲೋಕಸಭೆಗೆ ಸ್ಪರ್ಧಿಸುವ ನಿರ್ಧಾರ ಹೈಕಮಾಂಡ್ ನಿರ್ಧರಿಸುತ್ತದೆ. ಕತ್ತಿ ಪಕ್ಷ ಬಿಡಲು ನಾವು ಬಿಡುವುದಿಲ್ಲ. ನಾನು ಸೇರಿದಂತೆ ಹಿರಿಯ ನಾಯಕರು ಅವರೊಂದಿಗೆ ಚರ್ಚಿಸುತ್ತೇವೆ, ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಪಕ್ಷದಲ್ಲಿ ಅವರಿಗೆ ಉತ್ತಮ ಭವಿಷ್ಯವಿದೆ. ಅವರು ಕಾಂಗ್ರೆಸ್ ಸೇರುವ ನಿರ್ಧಾರ ಬದಲಿಸುತ್ತಾರೆಂಬ ವಿಶ್ವಾಸವಿದೆ” ಎಂದರು.