ಗೋಕಾಕದ ಮಾಜಿ ಶಾಸಕ ಚಂದ್ರಶೇಖರ ಗುಡ್ಡಕಾಯು ನಿಧನ

A B Dharwadkar
ಗೋಕಾಕದ ಮಾಜಿ ಶಾಸಕ ಚಂದ್ರಶೇಖರ ಗುಡ್ಡಕಾಯು ನಿಧನ

ಬೆಳಗಾವಿ, ಮೇ 21:  ಗೋಕಾಕದ ಮಾಜಿ ಶಾಸಕ ಚಂದ್ರಶೇಖರ ಟಿ.ಗುಡ್ಡಕಾಯು (91 ) ಅವರು ಸೋಮವಾರ ಬೆಳಗಾವಿಯ ಮಹಾಂತೇಶ ನಗರ ನಿವಾಸದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಅವರಿಗೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ. 1972 ರಲ್ಲಿ ಗೋಕಾಕ ಕಾಂಗ್ರೆಸ್ ಶಾಸಕರಾಗಿ ಅವರು ಒಂದು ಅವಧಿಗೆ ಆಯ್ಕೆಯಾಗಿದ್ದರು. ಸರಳ-ಸಜ್ಜನಿಕೆಗೆ ಹೆಸರುವಾಸಿಯಾಗಿ ಜನಮನ ಗೆದ್ದಿದ್ದರು.
ಚಂದ್ರಶೇಖರ ಗುಡ್ಡಕಾಯು ಅವರ ನಿಧನಕ್ಕೆ ಬೆಳಗಾವಿ ಜಿಲ್ಲೆಯ ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಕೆಲ ತಿಂಗಳ ಹಿಂದೆ ಚುನಾವಣೆ ನೆನಪು ಮೆಲುಕು ಹಾಕಿದ್ದ ಚಂದ್ರಶೇಖರ ಗುಡ್ಡಕಾಯು :

ನಾನು ಚುನಾವಣೆಗೆ ಖರ್ಚೇ ಮಾಡಿರಲಿಲ್ಲ. ಎಲ್ಲಾ ಮಾಡಿದ್ದು, ನೋಡಿಕೊಂಡಿದ್ದು ವಸಂತರಾವ ಅಣ್ಣಾ ಎಂದು ಗೋಕಾಕದ ಮಾಜಿ ಶಾಸಕ ಚಂದ್ರಶೇಖರ ಗುಡ್ಡಾಕಾಯು ಕೆಲ ತಿಂಗಳುಗಳ ಹಿಂದೆ ಅವರು ತಮ್ಮ ಚುನಾವಣೆಯ ಅನುಭವ ಹೇಳಿದ್ದರು.

1972 ರಲ್ಲಿ ಗೋಕಾಕದಿಂದ ಆಯ್ಕೆಯಾಗಿದ್ದ ಅವರು, ಅದಕ್ಕೂ ಮೊದಲು ಮಹಾರಾಷ್ಟ್ರ ಸರಕಾರದಲ್ಲಿ ನೀರಾವರಿ ಮಂತ್ರಿಯಾಗಿದ್ದ ದಿ.ಶಂಕರರಾವ ಚವ್ಹಾಣರಿಗೆ ಆಪ್ತ ಕಾರ್ಯದರ್ಶಿಯಾಗಿದ್ದರು. ಅಲ್ಲಿಂದ ಅವರನ್ನು ಬಿಡಿಸಿಕೊಂಡು ಬಂದ ರಾಯಬಾಗದ ವಸಂತರಾವ ಅಣ್ಣಾ ಗೋಕಾಕದಿಂದ ಚುನಾವಣೆಗೆ ನಿಲ್ಲಿಸಿದರು, ಆರಿಸಿ ಬಂದೆ ಎಂದು ಸ್ಮರಿಸಿಕೊಂಡಿದ್ದರು.

“ನನ್ನನ್ನು ಮಂತ್ರಿ ಮಾಡಲು ಮುಂದೆ ಬಂದ್ರು ದೇವರಾಜ ಅರಸ್ರು. ಒಲ್ಲೆಯಪ್ಪ ಮಾಡೋದಿದ್ರೆ ವಸಂತರಾವ ಅವರನ್ನೇ ಮಾಡ್ರಿ” ಎಂದೆ. ಅವರೇ ಮಂತ್ರಿ ಆದರು ಎಂದು ಅವರು ಅಂದಿನ ಘಟನೆ ಮೆಲುಕು ಹಾಕಿದ್ದರು.

1972 ರಲ್ಲಿ ಗುಡ್ಡಾಕಾಯು ಅವರು 28,005 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಸಂಸ್ಥಾ ಕಾಂಗ್ರೆಸ್ಸಿನ ಬಿ.ಎಮ್.ಪಾಟೀಲರು 11144 ಮತ ಪಡೆದಿದ್ದರು. 1978 ರಲ್ಲಿ ನಾನು, ವಸಂತರಾವ ಸೇರಿಯೇ ಗೋಕಾಕ ಮತ್ತು ಅರಭಾವಿಗಳಲ್ಲಿ ಸೋತೆವು ಎಂದು ಗುಡ್ಡಾಕಾಯು ಹೇಳಿದ್ದರು. ಕಾಂಗ್ರೆಸ್ ಇಬ್ಬಾಗವಾಗಿ ರೆಡ್ಡಿ ಕಾಂಗ್ರೆಸ್ಸಿನಿಂದ ಇವರಿಬ್ಬರೂ ಪರಾಭವಗೊಂಡಿದ್ದರು. ಮಾಜಿ ಶಾಸಕರಾದ ಮೇಲೆ ಗುಡ್ಡಾಕಾಯು ಅವರು ಬೆಳಗಾವಿಯ ಮಹಾಂತೇಶ ನಗರದಲ್ಲಿ ವಾಸಿಸುತ್ತಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.