ವಾಷಿಂಗ್ಟನ್, ಜುಲೈ 14: ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ ಟ್ರಂಪ್ ಮೇಲೆ ಪೆನ್ಸಿಲ್ವೇನಿಯಾದ ಚುನಾವಣೆ ಪ್ರಚಾರ ಸಭೆಯಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಟ್ರಂಪ್ ಗಾಯಗೊಂಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ಟ್ರಂಪ್ ಅವರ ಕಿವಿಗೆ ತಾಗಿದ ಆ ಗುಂಡು ಪಕ್ಕಕ್ಕೆ ಜಾರಿ ಹೋಗಿದೆ. ಗುಂಡು ತಗುಲಿದ ಪರಿಣಾಮ ಟ್ರಂಪ್ ಕಿವಿ ಮತ್ತು ಮುಖದ ತುಂಬಾ ರಕ್ತ ಹರಿದಾಡಿದೆ. ಆಗ ಭದ್ರತಾ ಸಿಬ್ಬಂದಿ ಸುತ್ತುವರಿದು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಟ್ರಂಪ್ ಅವರ ಜೀವಕ್ಕೆ ಈಗ ಯಾವುದೇ ಅಪಾಯ ಇಲ್ಲ ಎಂದು ತಿಳಿಸಲಾಗಿದೆ. ಟ್ರಂಪ್ ಕಿವಿ ಮತ್ತು ಮುಖದ ಮೇಲೆ ಗಾಯವಾಗಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಶಂಕಿತ ಬಂದೂಕುಧಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಅಮೆರಿಕ ಅಧ್ಯಕ್ಷರ ಹುದ್ದೆಗೆ 81 ವರ್ಷದ ಜೋ ಬೈಡನ್ ವಿರುದ್ಧ 78 ವರ್ಷದ ಟ್ರಂಪ್ ಸ್ಪರ್ಧಿಸಿದ್ದಾರೆ. ಹೀಗಾಗಿ ಇಬ್ಬರ ನಡುವೆ ತುರುಸಿನ ಸ್ಪರ್ಧೆ ಇದೆ. ಆದರೆ ಇಂತಹ ಸಮಯದಲ್ಲೇ ಅನಾಮಿಕರ ಗುಂಡಿನ ದಾಳಿ ಅಮೆರಿಕದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ಘಟನೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ್ದು, ಅಮೆರಿಕನ್ನರು ಈ ಘಟನೆಯಿಂದಾಗಿ ವಿಚಲಿತರಾಗಬೇಡಿ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಹೀಗಾಗಿ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.