ರಾಯಬಾಗ, ೮- ಬರ್ಬರವಾಗಿ ಕೊಲೆಗೀಡಾದ ಕಾಮಕುಮಾರ ನಂದಿ ಮಹಾರಾಜರ ಮರಣೋತ್ತರ ಪರೀಕ್ಷೆ ಮುಗಿಯಲು ರಾತ್ರಿಯಾಗುತ್ತದೆ. ಹೀಗಾಗಿ, ಅವರ ಅಂತ್ಯಸಂಸ್ಕಾರವನ್ನು ಹಿರೇಕೋಡಿಯ ಆಶ್ರಮದಲ್ಲಿ ಜುಲೈ 9ರಂದು ಮಧ್ಯಾಹ್ನದ ವೇಳೆಗೆ ಮುಗಿಸಲಾಗುವುದು ಎಂದು ನಂದಿಪರ್ವತ ಆಶ್ರಮ ಟ್ರಸ್ಟ್ನ ಅಧ್ಯಕ್ಷ ಡಾ.ಭೀಮಪ್ಪ ಉಗಾರೆ ಹೇಳಿದ್ದಾರೆ.
ಕಾಮಕುಮಾರ ಮಹಾರಾಜರು ಯಾರಿಗೂ ಅನ್ಯಾಯ ಮಾಡಿದವರಲ್ಲ. ಯಾವಾಗಲೂ ಜಗತ್ತಿನ ಸುಖ, ಶಾಂತಿಗೆ ಪ್ರಾರ್ಥಿಸುತ್ತಿದ್ದರು. ಅಂಥ ಮುನಿಯನ್ನೇ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದೂ ಆಗ್ರಹಿಸಿದರು.
ಹಂತಕರು ಗ್ರಾಮದ ಹೊರವಲಯದಲ್ಲಿ ಮುನಿ ಕಾಮಕುಮಾರ ನಂದಿಯವರ ಹತ್ಯೆ ಮಾಡಿ, ಶವ ವಿಲೇವಾರಿ ಮಾಡಲು ಸುಲಭವಾಗಲೆಂದು ಶವವನ್ನು ತುಂಡು ತುಂಡಾಗಿ ಕತ್ತರಿಸಿ ಕೊಳವೆ ಬಾವಿಯಲ್ಲಿ ಹಾಕಿದ್ದರು.
ಈ ಕುರಿತು ಹಂತಕರು ವಿಚಾರಣೆಯಲ್ಲಿ ನೀಡಿರುವ ಪ್ರಮುಖ ಮಾಹಿತಿಯನ್ನು ಸಮದರ್ಶಿಯೊಂದಿಗೆ ಹಂಚಿಕೊಂಡ ಚಿಕ್ಕೋಡಿ ವಿಭಾಗದ ಡಿ ಎಸ್ ಪಿ ಬಸವರಾಜ ಯಲಿಗಾರ ಅವರು,
ಮುನಿ ಕಾಮಕುಮಾರ ನಂದಿ ತಮ್ಮದೇ ಹೆಸರಿನಲ್ಲಿ “ಆಚಾರ್ಯ ಕಾಮಕುಮಾರ ನಂದಿ ಚಾರಿಟೇಬಲ್ ಟ್ರಸ್ಟ್ ” ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು. ವ್ಯಕ್ತಿಯೊಬ್ಬನಿಗೆ 6 ಲಕ್ಷ ರೂಪಾಯಿಗಳನ್ನು ಸಾಲವಾಗಿ ನೀಡಿದ್ದರು. ನೀಡಿದ್ದ ಸಾಲಕ್ಕೆ ಬಡ್ಡಿಯನ್ನೂ ಸೇರಿಸಿದ್ದರು. ಅಸಲು, ಬಡ್ಡಿಯನ್ನು ಹಿಂದಿರುಗಿಸಲಿಕ್ಕೆ ತಡ ಮಾಡುತ್ತಿರುವುದಕ್ಕೆ ಪ್ರಶ್ನಿಸಿದ್ದರಿಂದ ಸಹಿಸದೇ ಸಾಲ ಪಡೆದವರು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದರು.
ಕಳೆದ ಗುರುವಾರ ರಾತ್ರಿ ಸುಮಾರು 10 ಗಂಟೆಯಿಂದ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಆಶ್ರಮದಿಂದ ಕಾಣೆಯಾಗಿದ್ದ ಮುನಿ ಕಾಮಕುಮಾರ ನಂದಿ ಅವರನ್ನು ಅಪಹರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಹೋಗಿದ್ದ ಭಕ್ತರಿಬ್ಬರು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿ ನಂತರ ಶವವನ್ನು ತುಂಡು ತುಂಡು ಮಾಡಿ ಉಪಯೋಗದಲ್ಲಿರದ ಕೊಳವೆ ಬಾವಿಯೊಂದರಲ್ಲಿ ಎಸೆದಿದ್ದಾರೆ. ಈ ಘಟನೆ ರಾಯಬಾಗ ತಾಲ್ಲೂಕಿನ ಖಡಕಭಾವಿ ಗ್ರಾಮದ ಹೊರವಲಯದ ತೋಟವೊಂದರಲ್ಲಿ ಜರುಗಿದೆ. ಈ ಹೊಲ ಮುನಿಗಳಿಂದ ಸಾಲ ಪಡೆದವನದೇ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಶನಿವಾರ ಸುಮಾರು ಆರು ತಾಸು ಕೊಳವೆ ಬಾವಿಯ ಸುತ್ತಲೂ ಜೆಸಿಬಿ ಯಂತ್ರಗಳಿಂದ ಅಗೆದು ಮುನಿಗಳ ದೇಹದ ಕತ್ತರಿಸಿದ ಭಾಗಗಳನ್ನು ವಶಕ್ಕೆ ಪಡೆದು ದೇಹದ ಡಿಎನ್ ಎ ಪರೀಕ್ಷೆಗಾಗಿ ಬೆಂಗಳೂರಿನಲ್ಲಿರುವ ಫಾರೆನ್ಸಿಕ್ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.