ಬೆಳಗಾವಿ : ಮಹಾತ್ಮ ಗಾಂಧೀಜಿ ಅವರು ಅಹಿಂಸಾ ತತ್ವದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ಚೇತನ. ಅದಕ್ಕಾಗಿಯೇ ಅವರನ್ನು ಇಡೀ ವಿಶ್ವವೇ ಗೌರವಿಸುತ್ತದೆ. ರಕ್ತಕ್ರಾಂತಿಯಾಗದೇ ಯಾವುದೇ ದೇಶಕ್ಕೆ ಸ್ವಾತಂತ್ರ್ಯ ದೊರೆತ ಉದಾಹರಣೆಗಳಿಲ್ಲ. ಆದರೆ, ಅಹಿಂಸೆ ಮುಖಾಂತರವೂ ಶತ್ರುಗಳನ್ನು ಸೋಲಿಸಬಹುದು ಎನ್ನುವುದನ್ನು ಗಾಂಧೀಜಿ ತೋರಿಸಿಕೊಟ್ಟಿದ್ದಾರೆ. ನಾವೆಲ್ಲರೂ ಅವರ ಆದರ್ಶ, ತತ್ವಗಳನ್ನು ಪಾಲಿಸಬೇಕು ಎಂದು ಸಂಸದೆ ಮಂಗಳಾ ಅಂಗಡಿ ಅವರು ತಿಳಿಸಿದರು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಭಾನುವಾರ ಟಿಳಕವಾಡಿಯ ವೀರಸೌಧ (ಕಾಂಗ್ರೆಸ್ ಬಾವಿ)ದಲ್ಲಿ ಏರ್ಪಡಿಸಲಾದ ಮಹಾತ್ಮಾ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಆದರ್ಶ ಮೌಲ್ಯಗಳನ್ನು ಎಲ್ಲರೂ ಜೀವನದಲ್ಲಿ ಪಾಲಿಸುವಂತಾಗಬೇಕು.
ಮಾಜಿ ಪ್ರಧಾನಿ ಲಾಲ ಬಹಾದ್ದೂರ ಶಾಸ್ತ್ರಿ ಅವರು ಕೂಡ ಮಹಾನ್ ದೇಶ ಭಕ್ತರು. ದೇಶ ಸೇವೆಗೆ ತಮ್ಮ ಜೀವನ ಮುಡುಪಾಗಿಟ್ಟಿದ್ದರು ಎಂದು ಹೇಳಿದರು.
ಗಾಂಧೀಜಿ ತತ್ವಗಳು ಇಂದಿಗೂ ಜೀವಂತ:
ಗಾಂಧೀಜಿಯವರ ಮೌಲ್ಯಗಳಾದ ಸತ್ಯ, ಅಹಿಂಸೆಯ ಹಾದಿಯಲ್ಲಿ ಸಾಗಲು ಎಲ್ಲರೂ ಪ್ರಯತ್ನಿಸೋಣ.
ಇವರ ಶಾಂತಿ, ಅಹಿಂಸೆಯ ಮಾರ್ಗ ಭಾರತದ ಸ್ವಾತಂತ್ರ್ಯ ಹೋರಾಟಕ್ಕೊಂದು ಬಲ ತಂದಿದ್ದಲ್ಲದೆ, ಲಕ್ಷಾಂತರ ಹೃದಯವನ್ನು ಗೆಲ್ಲುವಂತೆಯೂ ಮಾಡಿತ್ತು. ಇವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಂಸದೆ ಮಂಗಳಾ ಅಂಗಡಿ ಹೇಳಿದರು.
ಇದಕ್ಕೂ ಮುಂಚೆ ಮಹತ್ಮಾ ಗಾಂಧೀಜಿಯವರ ಮೂರ್ತಿಗೆ ಪುಷ್ಪಾರ್ಚನೆ ಹಾಗೂ ದೀಪ ಬೆಳಗುವುದರ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು.
ಬಳಿಕ ಸ್ವಾತಂತ್ರ್ಯ ಯೋಧರ ಉತ್ತಾರಧಿಕಾರಿಗಳ ಸಂಘದ ವತಿಯಿಂದ ಸಂಸದೆ ಮಂಗಳಾ ಅಂಗಡಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಪಾಲಿಕೆ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಗುರುನಾಥ ಕಡಬೂರ, ಸಂಬಂಧಿಸಿದ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಎಸ್.ಎಲ್.ವಿ.ಕೆ ಶಾಲಾ ಮಕ್ಕಳು ಮತ್ತು ಸೇವಾದಳದ ಮಕ್ಕಳು ಪಾಲ್ಗೊಂಡಿದ್ದರು.
ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಘಾಳಿ ಸ್ವಾಗತ ಕೋರಿದರು. ಸರ್ವಮಂಗಳಾ ಅರಳಿಮಟ್ಟಿ ಅವರು ನಿರೂಪಿಸಿ ವಂದಿಸಿದರು. ಸಂಗೀತ ಶಿಕ್ಷಕರಾದ ಮೋರೆ ಹಾಗೂ ತಂಡದವರು ಗಾಂಧೀ ಪ್ರಿಯ ಭಜನ್ ಪ್ರಸ್ತುತಪಡಿಸಿದರು.