ಗೋಕಾಕ ಅ ೮ : ಹಾವು ಹಾಲು ಕುಡಿಯುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾದರೂ ಜನರು ಮೌಢ್ಯ ಅನುಸರಿಸುತ್ತಿದ್ದಾರೆ. ಪೌಷ್ಟಿಕ ಆಹಾರವಾದ ಹಾಲನ್ನು ವ್ಯರ್ಥ ಮಾಡದೇ ಮಕ್ಕಳಿಗೆ, ರೋಗಿಗಳಿಗೆ ನೀಡುವ ಮೂಲಕ ಬಸವ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಗುರುವಾರ ನಗರದ ಸರಕಾರಿ ಆಸ್ಪತ್ರೆಯಲ್ಲಿ ಬಸವ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ, ವಚನ ಸಾಹಿತ್ಯ ಚಿಂತನ, ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ನಾಗರಪಂಚಮಿ ನಿಮಿತ್ತ ರೋಗಿಗಳಿಗೆ ಹಾಲನ್ನು ವಿತರಿಸಿ ಅವರು ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ನಾಗರಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಲಾಗುತ್ತಿದೆ. ಜನರು ಲಕ್ಷಾಂತರ ಲೀಟರ್ ಹಾಲು, ತುಪ್ಪ, ಹಣ್ಣನ್ನು ಹುತ್ತ, ನಾಗರ ಕಲ್ಲುಗಳ ಮೇಲೆ ಸುರಿಯುತ್ತಾರೆ. ಹಾವು ಹಾಲು ಕುಡಿಯುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾದರೂ ಜನರು ಮೌಢ್ಯ ಅನುಸರಿಸುತ್ತಿದ್ದಾರೆ. ಜನತೆ ಮೂಢನಂಬಿಕೆಗಳಿಂದ ಹೊರಬಂದು ನಿಜವಾದ ಆಚರಣೆಗಳನ್ನು ಆಚರಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಬ್ರಹ್ಮಾನಂದ ಸ್ವಾಮೀಜಿ, ಡಾ.ರವೀಂದ್ರ ಅಂಟಿನ, ಬಸನಗೌಡ ಪಾಟೀಲ, ಬಸವರಾಜ ಖಾನಪ್ಪನವರ, ಶೈಲಾ ಬೀದರಿ, ಎಸ್.ಕೆ.ಮಠದ, ಬಸವರಾಜ ಹತ್ತರಕಿ, ಮಹಾಲಿಂಗಪ್ಪ ನೇಗಿನಾಳ, ಕಾಳಪ್ಪ ಗುರಾಣಿ, ಶ್ರೀಕಾಂತ ಹಳ್ಳೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.