ಕರ್ನಾಟಕದ ತರಕಾರಿಗೆ ಗೋವಾ ವಿಧಿಸಲಿದೆ ನಿಷೇಧ

A B Dharwadkar
ಕರ್ನಾಟಕದ ತರಕಾರಿಗೆ ಗೋವಾ ವಿಧಿಸಲಿದೆ ನಿಷೇಧ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಬೆಳಗಾವಿ : ತರಕಾರಿ, ಮಾಂಸ, ಹಾಲಿಗೆ ಬೆಳಗಾವಿಯ ಮೇಲೆ ಅವಲಂಬಿತವಾಗಿರುವ ಗೋವಾ ರಾಜ್ಯವು ತೋಟಗಾರಿಕೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದಲು ಶೀಘ್ರದಲ್ಲೇ ಬೆಳಗಾವಿ ಜಿಲ್ಲೆಯ ತರಕಾರಿಗಳಿಗೆ ತನ್ನ ರಾಜ್ಯದಲ್ಲಿ ನಿಷೇಧ ವಿಧಿಸಲು ನಿರ್ಧರಿಸಿದೆ.

ಬೆಳಗಾವಿಯಿಂದ ಸುಮಾರು 100 ಕಿಮಿ ಅಂತರದಲ್ಲಿರುವ ಪ್ರವಾಸೋದ್ಯಮಕ್ಕಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಗೋವಾ ರಾಜ್ಯವು ಭೌಗೋಳಿಕವಾಗಿ ಬೆಳಗಾವಿ ಜಿಲ್ಲೆಯ ಅರ್ಧದಷ್ಟು ಸಹ ಇಲ್ಲ. ಅಲ್ಲಿಯ ತಲಾ ವರಮಾನದಲ್ಲಿ ದೇಶದಲ್ಲೇ ಗೋವಾ ನಂಬರ್ ಒನ್ ಇದೆ.  ಆಧಾರನಿಂದ ದೊರೆತ ಅಂಕಿ ಅಂಶಗಳ ಪ್ರಕಾರ 2018ರ ಡಿಸೆಂಬರ್ ವರೆಗೆ ಅಲ್ಲಿ 1542750 ಜನಸಂಖ್ಯೆ ಇತ್ತು. ಶಾಂತಿಪ್ರಿಯ ಗೋವಾ ರಾಜ್ಯ ತನ್ನ ಅಭಿವೃದ್ಧಿಗೆ ಪ್ರವಾಸೋದ್ಯಮವನ್ನೇ ಆಶ್ರಯಿಸಿದ್ದು ಪ್ರತಿವರ್ಷ ಮೂವತ್ತು ಲಕ್ಷ ದೇಶಿ ಪ್ರವಾಸಿಗರು ಮತ್ತು ಐದು ಲಕ್ಷ ವಿದೇಶಿ ಪ್ರವಾಸಿಗರು ಸುಂದರ ಕಡಲ ತೀರಗಳ ಈ ರಾಜ್ಯಕ್ಕೆ ಭೇಟಿ ಕೊಡುತ್ತಾರೆ. ವಿದೇಶಿಗರಲ್ಲಿ ಮುಖ್ಯವಾಗಿ ಯುರೋಪ್ ಖಂಡದ ಪ್ರವಾಸಿಗರೇ ಅದರಲ್ಲೂ ಹಿಂದಿನ ಸೋವಿಯತ್ ದೇಶದ ರಾಷ್ಟ್ರಗಳಿಂದ ಹೆಚ್ಚಿನ ಪ್ರವಾಸಿಗರು ಈ ಪುಟ್ಟ ರಾಜ್ಯದ ಮುಖ್ಯ ಆದಾಯದ ಮೂಲ ಆಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹೊರತು ಪಡಿಸಿ ಇಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದೆ.

ಮಳೆಗಾಲ ಹೊರತು ಮಿಕ್ಕೆಲ್ಲ ಅವಧಿಯಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುವ ಈ ರಾಜ್ಯ ಈಗ ತನ್ನ ರೈತರ ಕುರಿತು ಗಮನ ಹರಿಸಿದೆ. ಇತ್ತೀಚಿಗೆ ನೈಸರ್ಗಿಕ ಕೃಷಿ ಕುರಿತ ರೈತರ ಸಭೆಯೊಂದರಲ್ಲಿ ಮಾತನಾಡಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು, ಪ್ರವಾಸೋದ್ಯಮದ ಮೇಲೆ ಅವಲಂಬನೆಯಾಗಿರುವ ಗೋವಾ ರಾಜ್ಯವು ತರಕಾರಿ, ಮಾಂಸ, ಹಾಲು ಮುಂತಾದವುಗಳಿಗೆ ಕರ್ನಾಟಕದ ಬೆಳಗಾವಿಯನ್ನು ಆಶ್ರಯಿಸಿಕೊಂಡಿದೆ. ನಮ್ಮ ರಾಜ್ಯವನ್ನು ಸ್ವಾವಲಂಬಿಯನ್ನಾಗಿ ಮಾಡುವ ಮೊದಲ ಯತ್ನವಾಗಿ ಬೆಳಗಾವಿಯಿಂದ ಬರುವ ತರಕಾರಿಯನ್ನು ನಿಷೇಧಿಸಿ ಇಲ್ಲಿಯೇ ಬೆಳೆಯುವ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.

ಆಧುನಿಕ ತಂತ್ರಜ್ಞಾನದ ಮೂಲಕ ಹೈಡ್ರೋಜನಿಕ್ ತಂತ್ರಜ್ಞಾನ ಬಳಸಿ ನೀರು, ಬೆಳಕಿನ ಅಗತ್ಯವಿಲ್ಲದೇ ಕಟ್ಟಡಗಳ ಒಳಗೇ ತರಕಾರಿ ಬೆಳೆಯುವ ಯೋಜನೆಯಿದ್ದು ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವದು. ಈ ಯೋಜನೆಯಲ್ಲಿ ಭಾಗವಹಿಸುವ ಕೃಷಿಕರಿಗೆ ಸಾಕಷ್ಟು ಸಹಾಯಧನವುಳ್ಳ ಸಾಲ ನೀಡಿ, ಬೆಳೆದ ಬೆಲೆಯನ್ನು ಬೆಂಬಲ ಬೆಲೆ ನೀಡಿ ಸರಕಾರವೇ ಖರೀದಿಸಿ ಉತ್ತೇಜಿಸಲಿದೆ ಎಂದು ತಿಳಿಸಿದ್ದರು.

ಈ ಮಾದರಿಯಲ್ಲಿ ಬೆಳೆದ ಬೆಳೆ ಹೈಬ್ರಿಡ್ ತಳಿಯಾಗಲಿದ್ದು ನೈಸರ್ಗಿಕವಾಗಿ ಬೆಳೆದ ಬೆಳೆಗಿಂತ ಕಡಿಮೆ ಪೌಷ್ಠಿಕ ಮತ್ತು ರುಚಿಯ ಗುಣಮಟ್ಟ ಹೊಂದಿರುವ ಸಾಧ್ಯತೆ ಕಡಿಮೆ. ಈಗಾಗಲೇ ಉತ್ತಮ ಗುಣಮಟ್ಟದ, ಜವಾರಿ ತರಕಾರಿ ಸೇವಿಸಿ ಅಭ್ಯಾಸವಾಗಿರುವ ಗೋವಾ ಪ್ರಜೆಗಳು ಇದನ್ನು ಸ್ವೀಕರಿಸುವ ಸಾಧ್ಯತೆ ತೀರಾ ಕಡಿಮೆ.

ಸುಮಾರು ದಶಕದ ಹಿಂದೆ ಗೋವಾ ಇದೇ ಸ್ವಾವಲಂಬನೆ ಕಾರಣದಿಂದ ಅಲ್ಲಿನ ಕೃಷಿಕರಿಗೆ ತರಕಾರಿ ಬೆಳೆಯಲು ಉತ್ತೇಜಿಸಿ ಬೇಕಾದ ಎಲ್ಲ ಸೌಲಭ್ಯ ಒದಗಿಸಿತ್ತು. ಆದರೆ ಆ ರಾಜ್ಯದ ಹವಾಮಾನ ಮತ್ತು ನೀರು ಕೃಷಿಗೆ ಅದರಲ್ಲೂ ತರಕಾರಿ ಬೆಳೆಗೆ ಪೂರಕವಲ್ಲದ ಕಾರಣ ಬೆಳೆದ ಬೆಳೆಗೆ ಬೇಡಿಕೆ ದೊರೆಯದೇ ಯೋಜನೆ ವಿಫಲವಾಗಿತ್ತು.

ನೀರು ಮತ್ತು ವಾತಾವರಣ ಅನುಕೂಲವಾಗಿರದಿದ್ದರೇನು, ಆಧುನಿಕ ತಂತ್ರಜ್ಞಾನ ಬಳಸೋಣ, ಗೋವಾದಂತೆ ವಾತಾವರಣವುಳ್ಳ ವಿಶ್ವದ ಅನೇಕ ಕಡಲು ರಾಷ್ಟ್ರಗಳು ಈ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿಲ್ಲವೇ, ಹಾಗೆಯೇ ನಾವ್ಯಾಕೆ ಪ್ರಯತ್ನಿಸಬಾರದು. ಇನ್ನು ಮುಂದೆ ಗೋವಾ ತನಗೆ ಬೇಕಾದದ್ದೆಲ್ಲ ತಾನೇ ಉತ್ಪದಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಾವಂತ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಈ ಯೋಜನೆಯನ್ನು ಜಾರಿಗೆ ತರಲು ಗೋವಾ ತೋಟಗಾರಿಕೆ ಇಲಾಖೆ ಕಾರ್ಯತತ್ಪರವಾಗಿದ್ದು, ತೋಟಗಾರಿಕೆಯಲ್ಲಿ ತೊಡಗಿಕೊಳ್ಳಲು ಆಕರ್ಷಕ ಆಫರ್ ನೀಡಲು ಸಿದ್ಧತೆ ನಡೆಸಿದೆ.

ಬೆಳಗಾವಿಯಿಂದ ಗೋವಾಗೆ ಪ್ರತಿನಿತ್ಯ 750 ಟನ್ ತರಕಾರಿ, 1000 ಕೆಜಿ ದನದ ಮಾಂಸ, 100 ಕೆಜಿ ಹೂವು, ಮೂರು ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಲಿದೆ. ಪೊರ್ಚುಗೀಸರು ಆಳಿರುವ ಗೋವಾ ರಾಜ್ಯವು ಹಂದಿ ಮಾಂಸ ಸೇವನೆಗೂ ಹೆಸರಾಗಿದ್ದು ಅದಕ್ಕಾಗಿ ಬೆಳಗಾವಿ, ರಾಮದುರ್ಗ, ಸವದತ್ತಿ, ಗೋಕಾಕ ತಾಲೂಕುಗಳಲ್ಲಿ ಹಂದಿ ಸಾಕಣೆಯ ಫಾರ್ಮಗಳಿದ್ದು ದಿನಕ್ಕೆ 100 ಕೆಜಿ ಮಾಂಸ ರವಾನಿಸುತ್ತಿವೆ.

ಬೆಳಗಾವಿಯಲ್ಲಿ, ಖಾಸಗಿ ಮಾರುಕಟ್ಟೆ ಹೊರತು 120 ದಲ್ಲಾಳಿಗಳಿದ್ದು ಗೋವಾದಲ್ಲಿರುವ 1300 ಕ್ಕೂ ಹೆಚ್ಚು ವ್ಯಾಪಾರಸ್ಥರಿಗೆ ನಿತ್ಯ ತರಕಾರಿ ಕಳುಹಿಸುತ್ತಾರೆ. ಅಲ್ಲಿನ ವ್ಯಾಪಾರಿಗಳು ತಮ್ಮ ರಾಜ್ಯದಲ್ಲಿ ಬೆಳೆದ ತರಕಾರಿಗಳಿಗಿಂತ ಬೆಳಗಾವಿಯಲ್ಲಿ ಬೆಳೆದ ತರಕಾರಿಗೆ ಹೆಚ್ಚಿನ ಬೇಡಿಕೆಯಿರುವದರಿಂದ ಇದಕ್ಕೆ ಆದ್ಯತೆ ಕೊಡುತ್ತಾರೆ ಎಂದು ಸುಮಾರು 35 ವರ್ಷಗಳಿಂದ ಬೆಳಗಾವಿಯ ಸರಕಾರಿ ಎಪಿಎಂಸಿಯಲ್ಲಿ ಎಜೆಂಟರಾಗಿರುವ ಸತೀಶ ಪಾಟೀಲ ತಿಳಿಸಿದರು. ಬೆಳಗಾವಿ ಜಿಲ್ಲೆಯ ತರಕಾರಿ ಗೋವಾಗೆ ಮಾತ್ರವಲ್ಲದೇ ಮುಂಬೈ, ಗುಜರಾತ್ ರಾಜ್ಯಗಳಿಗೂ ಸರಬರಾಜಾಗುತ್ತದೆ.

ಗೋವಾ ಪ್ರವಾಸೋದ್ಯಮದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ ಗೋವಾದವರಿಗೆ ಬೆಳಗಾವಿಯೇ “ವೀಕ್ ಎಂಡ್ ಡೆಷ್ಟಿನೇಷನ್” ಆಗಿದೆ. ಗೋವಾದವರಿಗಾಗಿಯೇ ಬೆಳಗಾವಿಯಲ್ಲಿ ಅನೇಕ ಹೋಟೆಲ್ ಗಳಿದ್ದು ಕುಟುಂಬ ಸಮೇತ ಶುಕ್ರವಾರ ಸಂಜೆ ಅಥವಾ ಶನಿವಾರ ಮುಂಜಾನೆ ಆಗಮಿಸುವ ಅವರು, ಹಿಂದಿರುಗುವಾಗ ಕಾರುಗಳಲ್ಲಿ ಹಿಡಿಯುವಷ್ಟು ರಸ್ತೆ ಬದಿ ದೊರೆಯುವ ತರಕಾರಿಯನ್ನು ಮತ್ತು ಕ್ಯಾಂಪ್ ಮಾರುಕಟ್ಟೆಯಲ್ಲಿ ಸಿಗುವ ಬೀಫ್ ಕೊಂಡು ಹೋಗುವದು ರೂಢಿಯಾಗಿದೆ. ಹಬ್ಬಗಳು, ಮದುವೆ ಸಮಾರಂಭಗಳಿಗಾಗಿ ಬಟ್ಟೆ ಖರೀದಿಸಲು ಗೋವನ್ ರು ಬರುವುದು ಬೆಳಗಾವಿಗೇನೇ.  ನಮ್ಮ ಜನರಿಗೆ ಗೋವಾ ಬೀಚ್ ಹಿಡಿಸಿದರೆ ಅಲ್ಲಿನ ಜನರಿಗೆ ಬೆಳಗಾವಿಯ ವಾತಾವರಣ ತುಂಬಾ ಹಿಡಿಸುತ್ತದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.