ಬೆಂಗಳೂರು, 11: ಕೆಲ ದಿನಗಳಿಂದ ಚರ್ಚೆಯ ವಿಷಯವಾಗಿದ್ದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಖಾದ್ಯ ನಿಷೇಧದ ಬಗ್ಗೆ ರಾಜ್ಯ ಸರ್ಕಾರ ಸೋಮವಾರ ನಿರ್ಧಾರ ಪ್ರಕಟಿಸಿದೆ. ಕಲರ್ ಕಾಟನ್ ಕ್ಯಾಂಡಿಯನ್ನು ರಾಜ್ಯದಲ್ಲಿ ಬ್ಯಾನ್ ಮಾಡಲಾಗಿದ್ದು, ಗೋಬಿ ಮಂಚೂರಿಯಲ್ಲೂ ಕೃತಕ ಬಣ್ಣ ಬಳಸುವಂತಿಲ್ಲ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ ಗುಂಡೂರಾವ್, ಕಾಟನ್ ಕ್ಯಾಂಡಿಯಲ್ಲಿ ಬಳಸುವ ಬಣ್ಣದಲ್ಲಿ ಅಪಾಯಕಾರಿ ಅಂಶಗಳಿವೆ. ಹೀಗಾಗಿ ಅದನ್ನು ಬ್ಯಾನ್ ಮಾಡಲಾಗುತ್ತದೆ. ಆದರೆ ಬಣ್ಣ ಬಳಸದೇ ತಯಾರಿಸುವ ಕಾಟನ್ ಕ್ಯಾಂಡಿಗೆ ಅವಕಾಶವಿದೆ ಎಂದರು.
ಒಂದು ವೇಳೆ ಕಲರ್ ಕಾಟನ್ ಕ್ಯಾಂಡಿ ಮಾರಿದರೆ ಕಾನೂನು ರೀತಿಯ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಕೃತಕ ಬಣ್ಣ ಬಳಸುವಂತಿಲ್ಲ: ಪ್ರಸಿದ್ಧ ಖಾದ್ಯ ಗೋಬಿ ಮಂಚೂರಿಯು ಸಸ್ಯಹಾರಿ ಪದಾರ್ಥವಾದ ಕಾರಣ ಅದನ್ನು ಬ್ಯಾನ್ ಮಾಡಲಾಗದು. ಆದರೆ ಅದಕ್ಕೆ ಕೃತಕ ಬಣ್ಣ ಬಳಸುವಂತಿಲ್ಲ ಎಂದು ದಿನೇಶ ಗುಂಡೂರಾವ್ ತಿಳಿಸಿದರು.
ರಾಜ್ಯದಲ್ಲಿ 171 ಗೋಬಿ ಮಂಚೂರಿಯನ್ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ. ಅದರಲ್ಲಿ 107 ಸ್ಯಾಂಪಲ್ ನಲ್ಲಿ ಕೃತಕ ಬಣ್ಣ ಪತ್ತೆಯಾಗಿದೆ. ಗೋಬಿ ಮಂಚೂರಿಯನ್ ನಲ್ಲಿ ಟಾರ್ ಟ್ರಾಸೈನ್, ಸಮ್ ಸೆಟ್ ಯೆಲ್ಲೋ ಮತ್ತು ಕಾರ್ಮಿಸನ್ ಬಳಕೆ ಮಾಡಲಾಗಿದೆ ಎಂದರು.
ಗೋಬಿ ಮಂಚೂರಿಯನ್ನು ನಿಷೇಧಿಸುತ್ತಿಲ್ಲ. ಆದರೆ ಕೃತಕ ಬಣ್ಣ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಕೃತಕ ಬಣ್ಣ ಬಳಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.