ಗೋಕಾಕ, 24: ಪ್ರತಿ ವರ್ಷದಂತೆ ಈ ವರ್ಷವೂ ಗೋಕಾಕದಿಂದ ಶ್ರೀಕ್ಷೇತ್ರ ಯಡೂರ ಶ್ರೀ ವೀರುಪಾಕ್ಷಲಿಂಗ ದೇವಸ್ಥಾನಕ್ಕೆ ಪಾದಯಾತ್ರೆಯು ಡಿಸೆಂಬರ್ 8 ರಂದು ಹೊರಡಲಿದೆ. ಅಂದು ಶುಕ್ರವಾರ ರಾತ್ರಿ 8 ಗಂಟೆಗೆ ಶ್ರೀ ದ್ಯಾಮವ್ವಾದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಮತ್ತು ಮಂಗಳಾರತಿ ನೆರವೇರಿಸಿದ ನಂತರ ಯಡೂರಿಗೆ ಪಾದಯಾತ್ರೆ ಹೊರಡಲಿದೆ.
ಇದೇ ವರ್ಷದಿಂದ ಯಡೂರ ಪಾದಯಾತ್ರಾ ಭಕ್ತ ಮಂಡಳಿ ವತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ-ಯಡೂರ ಇವರ ದಿವ್ಯ ಸಾನಿಧ್ಯದಲ್ಲಿ ಡಿಸೆಂಬರ 10 ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ಸಾಮೂಹಿಕ ವಿವಾಹದ ಅಂಗವಾಗಿ ಡಿಸೆಂಬರ್ 9ರಂದು ಸಂಜೆ 6 ಗಂಟೆಗೆ ಬೀಗರ ಎದುರುಗೊಳ್ಳುವ ಕಾರ್ಯಕ್ರಮ, 7 ಗಂಟೆಗೆ ಕೃಷ್ಣಾ ನದಿ ತೀರದಲ್ಲಿ ಕಾರ್ತಿಕೋತ್ಸವ ಮತ್ತು ಮದ್ದು ಹಾರಿಸುವ ಕಾರ್ಯಕ್ರಮ, ನಂತರ ರಾತ್ರಿ 8 ಗಂಟೆಗೆ ಸರ್ವ ಭಕ್ತಾದಿಗಳಿಗೆ ಪ್ರಸಾದ, 9 ಗಂಟೆಗೆ ವಧು-ವರರಿಗೆ ಅರಿಶಿನ ಮತ್ತು ಸುರಗಿ ಸುತ್ತುವ ಕಾರ್ಯಕ್ರಮ, ರಾತ್ರಿ 10.30 ರಿಂದ ಬೆಳಗಿನವರೆಗೆ ಭಜನಾ ಕಾರ್ಯಕ್ರಮ ನಡೆಯಲಿವೆ.
ಡಿಸೆಂಬರ್ 10 ರಂದು ಬೆಳಗ್ಗೆ 6 ಗಂಟೆಗೆ ಅಭಿಷೇಕ ಮತ್ತು ಮಹಾಪೂಜೆ ಜರುಗುವುದು. 9 ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, 10.30 ಕ್ಕೆ ದೇವರಿಗೆ ನೈವೇದ್ಯ ಮತ್ತು ಮಹಾಮಂಗಳಾರತಿ ಜರಗುವುದು. ಮಧ್ಯಾಹ್ನ 12.15 ಕ್ಕೆ ಉಚಿತ ಸಾಮೂಹಿಕ ವಿವಾಹ ಮತ್ತು ಮಹಾಪ್ರಸಾದ ಇರುತ್ತದೆ. ಸಾಮೂಹಿಕ ವಿವಾಹದಲ್ಲಿ ಬಾಲ್ಯ ವಿವಾಹಕ್ಕೆ ಅವಕಾಶವಿರುವುದಿಲ್ಲ.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಲು ಬಯಸುವವರು ಯಡೂರ ಪಾದಯಾತ್ರಾ ಭಕ್ತ ಮಂಡಳಿ, ಗೋಕಾಕ ಇವರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿ ಮತ್ತು ಹೆಸರು ನೊಂದಾಯಿಸಲು ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದು: 9448393820, 9844455738, 8792390008, 9986547337, 9590501115, 9886297334.