ಬೆಳಗಾವಿ, 16: ಶ್ರೀ ಸಿದ್ದರಾಮೇಶ್ವರ ಎಜುಕೇಶನ್ ಟ್ರಸ್ಟಿನ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ ಸ್ಥಾಪನೆಯಾಗಿ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಡಿಸೆಂಬರ 7ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಸ್ಥೆಯ ಕಾರ್ಯದರ್ಶಿ ಕೆ ಬಿ ಹಿರೇಮಠ ಅವರು ನಗರದಲ್ಲಿ ಗುರುವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳು 1969 ರಲ್ಲಿ ಪ್ರೌಢಶಾಲೆಯನ್ನು ಮತ್ತು 1972 ರಲ್ಲಿ ಪ್ರಾಥಮಿಕ ಶಾಲೆಯನ್ನು ಕೆಎಲ್ಈ ಸಂಸ್ಥೆಯ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಎದುರು ಪ್ರಾರಂಭಿಸಿದರು. ಪ್ರೌಢಶಾಲೆಗೆ 50 ವರುಷ ಪೂರೈಸಿದ ಸಂಭ್ರಮಕ್ಕಾಗಿ “ಸುವರ್ಣ ಸಂಭ್ರಮ” ಕಾರ್ಯಕ್ರಮವನ್ನು ಶಿವಬಸವ ನಗರದಲ್ಲಿರುವ ಸಂಸ್ಥೆಯ ಎಸ್ ಜಿ ಬಾಳೆಕುಂದ್ರಿ ಇಂಜಿನೀಯರಿಂಗ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದೆ.
ಶಿವಬಸವ ಮಹಾಸ್ವಾಮಿಗಳ 134 ನೇ ಜಯಂತಿ ಉತ್ಸವ ಹಿನ್ನಲೆಯಲ್ಲಿ ಡಿಸೆಂಬರ 5 ಮತ್ತು 6 ರಂದು ಈಗಿನ ಮತ್ತು ಹಳೆಯ ವಿದ್ಯಾರ್ಥಿಗಳು ಸಮ್ಮೇಳನ ಜರುಗಲಿದೆ. ಸುಮಾರು 8,000 ಹಳೆಯ ವಿದ್ಯಾರ್ಥಿಗಳಲ್ಲಿ ಅಂದಾಜು 6,000 ವಿದ್ಯಾರ್ಥಿಗಳು ಭಾಗವಹಿಸುವ ಸಾಧ್ಯತೆಯಿದೆ. ಸಮಾರಂಭದಲ್ಲಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದವರನ್ನು ಗೌರವಿಸಲಾಗುವುದು ಎಂದು ಹಿರೇಮಠ ತಿಳಿಸಿದರು.
ಶ್ರೀ ನಿರಂಜನ್ ಜಗದ್ಗುರು ಡಾ. ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು, ಮೂರು ಸಾವಿರಮಠ ಹುಬ್ಬಳ್ಳಿ, ನಿರಂಜನ ಜಗದ್ಗುರು ಡಾ. ತೋಂಟದ ಡಾ. ಸಿದ್ದರಾಮ ಸ್ವಾಮಿಗಳು, ಗದಗ ಇವರು ಸಾನಿಧ್ಯ ವಹಿಸುವರು. ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ನಿವೃತ್ತ ಐಎಎಸ್ ಅಧಿಕಾರಿ ಎಸ್ ಎಂ ಜಾಮದಾರ ಉದ್ಘಾಟಿಸುವರು, ಆರು ವಿವಿಧ ಮಠಾಧೀಶರು ಭಾಗವಹಿಸುವರು ಎಂದು ಹಿರೇಮಠ ತಿಳಿಸಿದರು.
ಡಾ. ಶಿವಬಸವ ಮಹಾಸ್ವಾಮಿಗಳು ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ಶಹಾಪೂರಿನಲ್ಲಿ ಒಂದು ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿಯ ಪ್ರಸಾದ ನಿಲಯವನ್ನು ಸ್ಥಾಪಿಸಿದರು, ನಂತರ ಅದನ್ನು ಮಾರುತಿ ಗಲ್ಲಿಯಲ್ಲಿ ಸ್ಥಳಾoತರಿಸಲಾಯಿತು. ಇಲ್ಲಿದ್ದುಕೊಂಡು ಶಿಕ್ಷಣ ಪಡೆದವರಲ್ಲಿ ಅನೇಕರು ರಾಜ್ಯದ, ದೇಶದ ಹಲವು ಉನ್ನತ ಹುದ್ದೆಗಳಲಿದ್ದು, ಖ್ಯಾತಿಯನ್ನು ಗಳಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿರುವ ಡಾ. ಚಂದ್ರಶೇಖರ ಕಂಬಾರ ಅವರಲ್ಲಿ ಒಬ್ಬರು ಎಂದು ಹಿರೇಮಠ ತಿಳಿಸಿದರು.
ಡಾ. ಶಿವಬಸವ ಮಹಾಸ್ವಾಮಿಗಳು ಸ್ಥಾಪಿಸಿರುವ ಪ್ರಸಾದ ನಿಲಯದಲ್ಲಿ ಇಂದಿಗೂ ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ಕಲ್ಪಿಸಲಾಗಿದೆ. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ನೂರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಶೋಕ ಮಳಗಲಿ, ಬಸವರಾಜ ಹಟ್ಟಿಗೌಡರ, ದಿನೇಶ ಪಾಟೀಲ, ಎ.ಕೆ.ಪಾಟೀಲ ಮತ್ತು ಹಿರಿಯ ಪತ್ರಕರ್ತ, ಸಿದ್ದರಾಮೇಶ್ವರ ಶಾಲೆಯ ಹಳೆಯ ವಿದ್ಯಾರ್ಥಿಗಳೂ ಆದ ಮುರುಗೇಶ ಶಿವಪೂಜಿ ಉಪಸ್ಥಿತರಿದ್ದರು.