ರಾಮದುರ್ಗ, ಡಿ.2 : ಕನ್ನಡಿಗರ ಅಭಿವೃದ್ಧಿ ಹಾಗೂ ರಕ್ಷಣೆ ಸರಕಾರದ ಜವಾಬ್ದಾರಿಯಾಗಿದೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅಥವಾ ದೇಶದ ಯಾವುದೇ ರಾಜ್ಯದಲ್ಲಿರಲಿ ಅವರ ಅಭಿವೃದ್ಧಿಗೆ ಬದ್ಧವಾಗಿದ್ದು, ನಮ್ಮ ನಾಡು-ನುಡಿ ಅಭಿವೃದ್ಧಿ ಸರಕಾರದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಸಂನ್ಮೂಲ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ನಿ. ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಡಾ. ಶ್ಯಾಮ ಪ್ರಸಾದ ಮುಖರ್ಜಿ ವೇದಿಕೆಯಲ್ಲಿ ಶುಕ್ರವಾರ (ಡಿ.2) ರಾಮದುರ್ಗ ತಾಲೂಕಿನ ಅಂದಾಜು ರೂ. 671.28 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನವಭಾರತ ನಿರ್ಮಾಣಕ್ಕಾಗಿ ನವ ಕರ್ನಾಟಕ ನಿರ್ಮಿಸಲು ಜನರು ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.
ಸರಕಾರ ಜನಪ್ರಿಯವಾದರೆ ಸಾಲದು; ಜನಪರ ಸರಕಾರ ಇದ್ದಾಗ ಮಾತ್ರ ಕಟ್ಟ ಕಡೆಯ ಗ್ರಾಮಕ್ಕೂ ಅಭಿವೃದ್ಧಿ ಯೋಜನೆಗಳು ತಲುಪುತ್ತವೆ.
ನಮ್ಮ ಸರಕಾರ ಸಮಗ್ರ ಕರ್ನಾಟಕದ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ.
ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿರುವ ರಾಜ್ಯದ ಜಿಲ್ಲೆಗಳಲ್ಲಿ 1800 ಗ್ರಾಮ ಪಂಚಾಯತಿ ಅಭಿವೃದ್ಧಿಪಡಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಅದೇ ರೀತಿ ರಸ್ತೆಗಳ ಸುಧಾರಣೆಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ 100 ಕೋಟಿ:
ಗಡಿಯಾಚೆ ಇರುವವರು ನಮ್ಮವರು; ಅಲ್ಲಿನ ಕನ್ನಡ ಶಾಲೆಗಳನ್ನು ಅಲ್ಲಿನ ರಾಜ್ಯ ಸರಕಾರ ಕಡೆಗಣಿಸಿರುವುದರಿಂದ. ಮೂಲಸೌಕರ್ಯ ಕಲ್ಪಿಸುವುದು ಸಾಧ್ಯವಾಗಿರುವುದಿಲ್ಲ.
ಗಡಿಭಾಗದ ಶಾಲೆಗಳ ಅಭಿವೃದ್ದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಇದೇ ವರ್ಷ 100 ಕೋಟಿ ರೂಪಾಯಿ ಖರ್ಚು ಮಾಡಲಾಗುವುದು.
ಗೋವಾದಲ್ಲಿ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಅದೇ ರೀತಿ
ಸೋಲಾಪುರ ಹಾಗೂ ಕಾಸರಗೋಡಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ತಲಾ ಹತ್ತು ಕೋಟಿ ರೂಪಾಯಿಗಳನ್ನು ಸರಕಾರ ನೀಡಲಿದೆ.
ತಡೆಗೋಡೆ ನಿರ್ಮಾಣ; ಕೆರೆಗೆ ನೀರು:
ರಾಮದುರ್ಗ ತಾಲ್ಲೂಕಿನ ಕೆಲ ಗ್ರಾಮಗಳು ಪದೇ ಪದೆ ಪ್ರವಾಹದಿಂದ ಬಾಧಿತಗೊಳ್ಳುವುದನ್ನು ತಪ್ಪಿಸಲು ಮಲಪ್ರಭಾ ನದಿತೀರದಲ್ಲಿ ತಡೆಗೋಡೆ ನಿರ್ಮಿಸಲು ಸರಕಾರ ಮುಂದಾಗಿದೆ.
ಏತ ನೀರಾವರಿಯಿಂದ ವಂಚಿತಗೊಂಡಿರುವ 19 ಗ್ರಾಮಗಳ ಕೆರೆ ತುಂಬಿಸುವ ಯೋಜನೆ ಜಾರಿಗೆ ತರಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಅವರು ನಿರಂತರ ಒತ್ತಡ ತಂದಿದ್ದಾರೆ.
ಕ್ಷೇತ್ರದ ಬಗ್ಗೆ ಅವರ ಕಳಕಳಿಯನ್ನು ಅರಿತುಕೊಂಡು ಅವರ ಒತ್ತಾಯದಂತೆ 19 ಕೆರೆಗಳನ್ನು ತುಂಬಿಸುವ ಯೋಜನೆಗೆ ಕೂಡಲೇ ಡಿಪಿಆರ್ ತಯಾರಿಸಿ ಮುಂದಿನ ಬಜೆಟ್ ನಲ್ಲಿ ಅನುದಾನ ತೆಗೆದಿರಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಹತ್ತು ಲಕ್ಷಕ್ಕೂ ಅಧಿಕ ಮಕ್ಕಳಿಗೆ 600 ಕೋಟಿ ರೂಪಾಯಿ ಶಿಷ್ಯವೇತನವನ್ನು ರೈತ ವಿದ್ಯಾನಿಧಿ ಯೋಜನೆ ಮೂಲಕ ಒದಗಿಸಲಾಗಿದೆ.
ಇದೇ ರೀತಿ ಕೃಷಿ ಕೂಲಿಕಾರರು, ಮೀನುಗಾರರು, ಚಾಲಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದರು.
ಎಲ್ಲ ಸಮುದಾಯಗಳಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಲಾಗಿದೆ. ಕಾಯಕ, ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ಎಲ್ಲ ವರ್ಗದ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸರಕಾರ ನೆರವು ನೀಡುತ್ತಿದೆ. ನಮ್ಮ ಕ್ಲಿನಿಕ್, ಶಾಲಾ ಕೊಠಡಿಗಳ ನಿರ್ಮಾಣ, ಆರೋಗ್ಯ ಸೌಲಭ್ಯ ಹೆಚ್ಚಳ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಿದ ಅವರು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಪ್ರಜಾಪ್ರಭುತ್ವ ಎಂದರೆ ಮತ ಹಾಕುವುದು ಮಾತ್ರವಲ್ಲ; ದೇಶ ಕಟ್ಟುವುದರಲ್ಲಿ ಸರ್ವರ ಪಾಲ್ಗೊಳ್ಳುವಿಕೆಯು ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ಹಿಂದಿನ ಸರಕಾರಗಳಿಗೆ ಇಚ್ಛಾಶಕ್ತಿ ಇಲ್ಲದಿರುವುದರಿಂದ ಪರಿಶಿಷ್ಟ ಜಾತಿ/ಪಂಗಡಗಳ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ. ಆದರೆ ಯಾವುದೇ ಟೀಕೆ-ಟಿಪ್ಪಣಿಗೆ ಸೊಪ್ಪುಹಾಕದೇ ಪರಿಶಿಷ್ಟ ಜಾತಿ/ಪಂಗಡಗಳ ಸಮುದಾಯದ ಮೀಸಲಾತಿ ಹೆಚ್ಚಿಸುವ ದಿಟ್ಟ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ ಎಂದರು.
ಬೆಳಗಾವಿ ಕರ್ನಾಟಕದ ಕಿರೀಟ:
ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯು ರಾಜ್ಯದ ಕಿರೀಟವಿದ್ದಂತೆ. ಈ ಜಿಲ್ಲೆಯ ನೀರಾವರಿ, ಕೈಗಾರಿಕೋದ್ಯಮ, ಕೃಷಿ ಅಭಿವೃದ್ಧಿಗೆ ಸರಕಾರ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಉತ್ತರ ಕರ್ನಾಟಕದ ಸಮಗ್ರ ಪ್ರಗತಿಗೆ ಮುಂಬರುವ ದಿನಗಳಲ್ಲಿ ಸರಕಾರ ವಿಶೇಷ ಯೋಜನೆ ಪ್ರಕಟಿಸಲಿದೆ ಎಂದು ಹೇಳಿದರು.
ಮಹಾದೇವಪ್ಪ ಯಾದವಾಡ ಜನಪ್ರಿಯ ಅಲ್ಲ; ಜನೋಪಯೋಗಿ ಶಾಸಕರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
ಜನರ ಜೀವನ ಗುಣಮಟ್ಟ ಹೆಚ್ಚಿಸಿ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ರೂಪಿಸುವವರು ನಿಜವಾದ ಶಾಸಕರು.
ಶಾಸಕ ಯಾದವಾಡ ಅವರು 2900 ಕೋಟಿ ರೂಪಾಯಿ ಅನುದಾನ ತಂದು ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಮನೆ ಮನೆಗೆ ಗಂಗೆಯನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಸ್ಥಳೀಯ ಶಾಸಕ ಮಹಾದೇವಪ್ಪ ಯಾದವಾಡ ಅವರ ಒತ್ತಾಸೆಯ ಫಲವಾಗಿ ರಾಮದುರ್ಗ ಮತಕ್ಷೇತ್ರದಲ್ಲಿ ಅತೀ ಹೆಚ್ಚಿನ ಅನುದಾನ ಹರಿದುಬಂದಿದೆ ಎಂದರು.
ಮಲಪ್ರಭಾ ನದಿ ಪ್ರವಾಹದಿಂದ ಬಾಧಿತಗೊಳ್ಳುತ್ತಿದ್ದ ಗ್ರಾಮಗಳ ರಕ್ಷಣೆಗೆ 126 ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿ ರಾಮದುರ್ಗ ತಾಲ್ಲೂಕಿನ 19 ಕೆರೆಗಳನ್ನು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಈ ತಿಂಗಳಿನಲ್ಲಿ ಡಿಪಿಆರ್ ತಯಾರಿಸಿ ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮುಂಬರುವ ಬಜೆಟ್ ನಲ್ಲಿ ಕೆರೆ ತುಂಬಿಸುವ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಸಚಿವರಾದ ಕಾರಜೋಳ ಭರವಸೆ ನೀಡಿದರು.
ಪರಿಶಿಷ್ಟ ಜಾತಿ/ಪಂಗಡದ ಮೀಸಲಾತಿ ಪ್ರಮಾಣ ಹೆಚ್ವಳ ಮಾಡುವ ಮೂಲಕ ಅನೇಕ ದಶಕಗಳ ಬೇಡಿಕೆಯನ್ನು ಸಿಎಂ ಈಡೇರಿಸಿದ್ದಾರೆ ಎಂದು ಹೇಳಿದರು.
ಬಸವೇಶ್ವರ ಪುತ್ಥಳಿ ಅನಾವರಣ:
ಇದಕ್ಕೂ ಮುಂಚೆ ರಾಮದುರ್ಗದ ಬಸವೇಶ್ವರ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನಾವರಣಗೊಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಮದುರ್ಗ ಶಾಸಕ ಮಹಾದೇವಪ್ಪ ದೊಡ್ಡವಾಡ ಅವರು, ರಾಮದುರ್ಗ ತಾಲ್ಲೂಕಿನ ಜನರಿಗೆ ಕುಡಿಯುವ ಒದಗಿಸುವ 439 ಕೋಟಿ ರೂಪಾಯಿ ಯೋಜನೆ ಜಾರಿಗೆ ತರಲು ಸರಕಾರ ಮುಂದಾಗಿದೆ ಎಂದರು.
ಕುಡಿಯುವ ನೀರು, ಶಾಲಾ ಕಟ್ಟಡಗಳ ನಿರ್ಮಾಣ, ವಿದ್ಯುತ್ ವಿತರಣೆ ವ್ಯವಸ್ಥೆ ಬಲಪಡಿಸುವುದು ಸೇರಿದಂತೆ ತಾಲ್ಲೂಕಿನ ಹತ್ತಾರು ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು.
ಚಂದರಗಿ ಭಾಗದ 19 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಘೋಷಿಸುವ ಮೂಲಕ ಬರದ ತಾಲ್ಲೂಕು ಎಂಬ ಹಣೆಪಟ್ಟಿ ಅಳಿಸಲು ಮುಂದಾಗಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಲೋಕೋಪಯೋಗಿ ಇಲಾಖೆಯ ಸಚಿವರಾದ ಸಿ.ಸಿ.ಪಾಟೀಲ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಸಚಿವರಾದ ಮುರುಗೇಶ್ ನಿರಾಣಿ, ನಗರಾಭಿವೃದ್ಧಿ ಸಚಿವರಾದ ಬಿ.ವಿ.ಬಸವರಾಜ್(ಭೈರತಿ), ಕೆಎಂಎಫ್ ಅಧ್ಯಕ್ಷರಾದ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಮಂಗಳ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಿ.ರಾಜೀವ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಹನುಮಂತ ನಿರಾಣಿ, ಶಾಸಕರಾದ ಅನಿಲ್ ಬೆನಕೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಸಕರಾದ ಮಹಾಂತೇಶ ದೊಡ್ಡಗೌಡರ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ದುರ್ಯೋಧನ ಐಹೊಳೆ ಅವರು ಮಾತನಾಡಿ, ರಾಮದುರ್ಗ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಶಾಸಕ ಮಹಾದೇವಪ್ಪ ದೊಡ್ಡವಾಡ ಅವರ ಕೊಡುಗೆ ದೊಡ್ಡದು ಎಂದು ಹೇಳಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಸ್ವಾಗತಿಸಿದರು. ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ಸಿಎಂ ವಿತರಿಸಿದರು. ವಿವಿಧ ಸಮುದಾಯದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿದರು.