ಬೆಳಗಾವಿ : ಕನ್ನಡ ಸಂಘಟನೆಗಳ ವಿರೋಧದ ನಡುವೆಯೂ ರಾಜ್ಯ ಸರಕಾರ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಮೂರು ಜಿಲ್ಲೆಗಳನ್ನು ರಚಿಸಲು ನಿರ್ಧರಿಸಿದೆ.
ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆಗಳನ್ನು ನೂತನ ಜಿಲ್ಲೆಗಳನ್ನಾಗಿ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 77 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಅತ್ಯಂತ ದೊಡ್ಡ ಜಿಲ್ಲೆಯಾದ ಬೆಳಗಾವಿ ವಿಭಜನೆಗೆ ಒತ್ತಡ ಇದ್ದು ಸದ್ಯದಲ್ಲೇ ಮೂರು ವಿಭಜನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಸದ್ಯ ಬೆಳಗಾವಿ ಜೊತೆಗೆ ಗೋಕಾಕ ಮತ್ತು ಚಿಕ್ಕೋಡಿ ಈ ಎರಡೂ ಹೊಸ ಜಿಲ್ಲೆಗಳನ್ನಾಗಿ ವಿಭಜನೆ ಮಾಡಲಾಗುತ್ತದೆ. ಅಥಣಿ ಮತ್ತು ಬೈಲಹೊಂಗಲ ಸಹ ಪ್ರತ್ಯೇಕ ಜಿಲ್ಲೆಗಳಾಗಬೇಕೆಂದು ಹೋರಾಟ ಮಾಡಲಾಗುತ್ತಿದೆ. ಸಚಿವರ ವಿಭಜನೆ ಹೇಳಿಕೆಗೆ ಕೆಲವು ಪ್ರದೇಶದಿಂದ ವಿರೋಧ ಉಂಟಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರದೊಂದಿಗಿನ ಗಡಿ ವಿವಾದ ಇತ್ಯರ್ಥವಾಗುವವರೆಗೂ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವುದು ಬೇಡ ಎಂದು ಕನ್ನಡ ಸಂಘಟನೆಗಳು ಹೋರಾಟ ಮಾಡಿದ್ದರಿಂದ ಅಂದಿನ ಜೆ ಎಚ್ ಪಟೇಲ್ ಸರಕಾರ ಇತರ ದೊಡ್ಡ ಜಿಲ್ಲೆಗಳನ್ನು ವಿಭಜಿಸಿದರೂ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿರಲಿಲ್ಲ. ಸಚಿವ ಜಾರಕಿಹೊಳಿಯವರ ಹೇಳಿಕೆ ಕನ್ನಡ ಸಂಘಟನೆಗಳ ಮತ್ತೊಂದು ಹೋರಾಟಕ್ಕೆ ಆಸ್ಪದ ನೀಡುವ ಸಾಧ್ಯತೆಯಿದೆ.
ಈ ಹಿಂದೆ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆಗಳನ್ನು ರಚಿಸಲು ಸರಕಾರ ಮುಂದಾದಾಗ ಬೈಲಹೊಂಗಲ ಮತ್ತು ಸವದತ್ತಿ ಭಾಗದವರು ವಿರೋಧಿಸಿದ್ದರು. ಬೈಲಹೊಂಗಲದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳೂ ಜರುಗಿದ್ದವು.
ಗೋಕಾಕ ನಗರ ಬೆಳಗಾವಿ ಜಿಲ್ಲೆಯಲ್ಲೇ ಅತೀ ದೊಡ್ಡ ನಗರವಾಗಿದ್ದು ಚಿಕ್ಕೋಡಿ ನಗರಕ್ಕಿಂತ ಮೂರು ಪಟ್ಟು ದೊಡ್ಡದಿದೆ. ಭೌಗೋಳಿಕವಾಗಿ ಸಹ ಜಿಲ್ಲೆ ನಿರ್ಮಾಣಕ್ಕೆ ಗೋಕಾಕ ಸೂಕ್ತವಾಗಿದೆ ಎಂದು ಗೋಕಾಕ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.