ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆಯನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ನಡೆಸುವುದಕ್ಕೆ ಅನುಮತಿ ನೀಡಿದೆ. ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿ ಬೋಧಕರಿಗೆ ಸಿಹಿಸುದ್ದಿ ನೀಡಿದೆ.
ಈ ಕುರಿತಂತೆ ಕಾಲೇಜು ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಪ್ರತಿ ವರ್ಷ ಕೌನ್ಸೆಲಿಂಗ್ ಮೂಲಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿರುತ್ತದೆ.
ವಿವಿಧ ಕಾರಣಗಳಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬೋಧಕರ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಳ್ಳದಿರುವುದರಿಂದ ಹಲವಾರು ಮನವಿಗಳು ಸರ್ಕಾರಕ್ಕೆ ಸ್ವೀಕೃತವಾಗಿದೆ ಎಂದು ಹೇಳಿದೆ.
ರಾಜ್ಯ ಸರ್ಕಾರಕ್ಕೆ ವರ್ಗಾವಣೆಗಾಗಿ ಸಲ್ಲಿಕೆಯಾದಂತ ಮನವಿಗಳ ಹಿನ್ನಲೆಯಲ್ಲಿ, ಆಯುಕ್ತಾಲಯದ ಪ್ರಸ್ತಾವನೆಯಂತೆ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಗಣಕೀಕೃತ ಕೌನ್ಸಿಲಿಂಗ್ ಆಧಾರದ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.