ಹಾವೇರಿ, ೧೯: ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ವರ್ತಿಸಿದ ಹೀನ ಘಟನೆ ಮಾಸುವ ಮೊದಲೇ ಇಂತಹುದೇ ಘಟನೆ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದೆ. ಇಲ್ಲಿ ದೌರ್ಜನ್ಯಕ್ಕೊಳಗಾದವರು ಗ್ರಾಮ ಪಂಚಾಯತ್ ನ ಪುರುಷ ಸದಸ್ಯ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿ ಈ ಅವಮಾನಕರ ಘಟನೆ ಸೋಮವಾರ ರಾತ್ರಿ ನಡೆದಿದೆ. ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಹತ್ತಿರದ ಸಂಬಂಧಿ ಯುವಕ ಮತ್ತು ಅದೇ ಗ್ರಾಮದ ಯುವತಿ ಸುಮಾರು ನಾಲ್ಕು ವರುಷದಿಂದ ಪ್ರೀತಿಸುತ್ತಿದ್ದು, ಕಳೆದ ಶುಕ್ರವಾರ ಇಬ್ಬರೂ ಮನೆಗಳಿಂದ ಪಲಾಯನ ಮಾಡಿದ್ದಾರೆ.
ಇದರಿಂದ ಅವಮಾನಿತರಾಗಿ ಕುಪಿತಗೊಂಡ ಯುವತಿ ಮನೆಯವರು, ಸಂಬಂಧಿಕರು ಪಲಾಯನ ಮಾಡಲು ಯುವಕನ ಸಂಬಂಧಿ ಗ್ರಾಮ ಪಂಚಾಯತ್ ಸದಸ್ಯರ ಕುಮ್ಮಕ್ಕು, ಬೆಂಬಲ ಕಾರಣವೆಂದು ಶಂಕಿಸಿ ಸೋಮವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಅವರ ಮನೆಯಿಂದ ಹೊರಗೆಳೆದು ಥಳಿಸಿ ಅವರು ಧರಿಸಿದ್ದ ಬಟ್ಟೆಗಳನ್ನು ಹರಿದು ತೆಗೆದು ಕೇವಲ ನಿಕ್ಕರ್ ಮೇಲೆ ನಿಲ್ಲಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ.
ಹಲ್ಲೆ ಅವಮಾನಕ್ಕೊಳಗಾಗಿರುವ ಗ್ರಾಮ ಪಂಚಾಯತ್ ಸದಸ್ಯರು ಯುವತಿ ಸಂಬಂಧಿಕ ಶಿವಾಜಿ ಕಮಡೋದು ಸೇರಿದಂತೆ 20 ಜನರ ವಿರುದ್ಧ ಹಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.