೧೭ ಜನರ ಸಾಮೂಹಿಕ ಹತ್ಯಾಕಾಂಡ; ಆರೋಪಿಗಳನ್ನು ಖುಲಾಸೆಗೊಳಿಸಿದ ಗುಜರಾತ್‌ ಕೋರ್ಟ

A B Dharwadkar
೧೭ ಜನರ ಸಾಮೂಹಿಕ ಹತ್ಯಾಕಾಂಡ; ಆರೋಪಿಗಳನ್ನು ಖುಲಾಸೆಗೊಳಿಸಿದ ಗುಜರಾತ್‌ ಕೋರ್ಟ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ವಡೋದರಾ: ೨೦೦೨ರ ಗುಜರಾತ್‌  ಹಿಂಸಾಚಾರ ನಡೆದ ಸಮಯದಲ್ಲಿ ಪಂಚಮಹಲ್ ಜಿಲ್ಲೆಯ ದೆಲ್ವೋಲ್ ಗ್ರಾಮದಲ್ಲಿ ಮಕ್ಕಳು ಸೇರಿದಂತೆ 17 ಮಂದಿ ಅಲ್ಪಸಂಖ್ಯಾತರ ಸಾಮೂಹಿಕ ನರಸಂಹಾರ ಮಾಡಿದ ಆರೋಪ ಹೊತ್ತಿದ್ದ 22 ಜನರನ್ನು ಹಲೋಲ್ ಹೆಚ್ಚುವರಿ ಸತ್ರ ನ್ಯಾಯಾಲಯವು ಮಂಗಳವಾರ ಖುಲಾಸೆಗೊಳಿಸಿದೆ.

2002ರ ಗುಜರಾತ್‌ ನರಮೇಧದ ಸಮಯದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ 17 ಮಂದಿಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಬಳಿಕ ಸಾಕ್ಷ್ಯವನ್ನು ನಾಶಪಡಿಸಲು ದೇಹಗಳನ್ನು ಸುಡಲಾಗಿತ್ತು.

ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಹಲೋಲ್ ಪಟ್ಟಣದ ನ್ಯಾಯಾಲಯವು, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 22 ಆರೋಪಿಗಳನ್ನು ದೋಷ ಮುಕ್ತಗೊಳಿಸಿದೆ.

18 ವರ್ಷಗಳಿಂದ ವಿಚಾರಣಾಧೀನ ಕೈದಿಗಳಾಗಿದ್ದ 8 ಮಂದಿ ವಿಚಾರಣೆ ವೇಳೆ ಮೃತಪಟ್ಟಿದ್ದರು. ಮೃತಪಟ್ಟವರ ಎಲುಬುಗಳು ಸೇರಿದಂತೆ ಎಲ್ಲ ಪುರಾವೆಗಳನ್ನು ನ್ಯಾಯಾಲಯ ಪರಿಶೀಲನೆ ನಡೆಸಿದೆ. ಆದರೆ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಇಲ್ಲ ಎಂದು ಆರೋಪಿಗಳ ಪರ ವಕೀಲ ಗೋಪಾಲ್‌ಸಿಂಗ್ ಸೋಲಂಕಿ ಹೇಳಿದ್ದಾರೆ. ಇದರ ಜತೆಗೆ ಸುಮಾರು 100 ಮಂದಿ ಸಾಕ್ಷಿಗಳನ್ನು ಪರಿಶೀಲನೆ ಮಾಡಲಾಗಿದ್ದು, ಇವರು ಕೂಡಾ ಈಗ ಮೂಲ ಹೇಳಿಕೆಯಿಂದ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ ಎಂದು ಕಾರಣ ಕೊಡಲಾಗಿದೆ.

2002ರಲ್ಲಿ 59 ಮಂದಿಯ ಸಾವಿಗೆ ಕಾರಣವಾದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಬೆಂಕಿಯ ಘಟನೆ ಬಳಿಕ ಭಾರಿ ಪ್ರಮಾಣದ ನರಮೇಧಗಳು ನಡೆದಿದ್ದವು. ಘಟನೆಯ ಮರುದಿನ ಅಂದರೆ ಮಾರ್ಚ 1ರಂದು ಗೋದ್ರಾದಿಂದ 30 ಕಿಲೋಮೀಟರ್ ದೂರದ ಕಲೋಲ್ ಪಟ್ಟಣದ ದೆಲ್ವೋನಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 17 ಮಂದಿ ಜೀವಂತ ದಹನವಾಗಿದ್ದರು.

ಘಟನೆಯಲ್ಲಿ ಸಂತ್ರಸ್ತರು ಮತ್ತು ಪ್ರತ್ಯಕ್ಷ ಸಾಕ್ಷಿಗಳು ಮನವಿ ಸಲ್ಲಿಸಿದರೂ ಪೊಲೀಸ್ ಅಧಿಕಾರಿಯೊಬ್ಬರು ಎಫ್‌ಐಆರ್ ದಾಖಲಿಸಿಲ್ಲ ಎಂಬ ಆರೋಪವೂ ಸೇರಿದಂತೆ ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆದಿತ್ತು.

2003ರ ಡಿಸೆಂಬರ್‌ನಲ್ಲಿ ಅಂದರೆ ಘಟನೆ ನಡೆದ 20 ತಿಂಗಳ ಬಳಿಕ ಮರು ವಿಚಾರಣೆಗೆ ಆದೇಶಿಸಲಾಗಿತ್ತು. ತಲೆ ಮರೆಸಿಕೊಂಡಿದ್ದ ಎಲ್ಲ ಆರೋಪಿಗಳನ್ನು 2004ರಲ್ಲಿ ಬಂಧಿಸಲಾಗಿದ್ದು, ಅವರ ಜಾಮೀನು ಅರ್ಜಿಗಳನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ 2004ರಲ್ಲಿ ಅವರಿಗೆ ಗುಜರಾತ್ ಹೈಕೋರ್ಟ ಜಾಮೀನು ಸಹ ಮಂಜೂರು ಮಾಡಿತ್ತು. ಈಗ ಅವರು ಖುಲಾಸೆಯಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.