ಅಹಮದಾಬಾದ, ೩೦: ಮಸೀದಿಗಳಲ್ಲಿ ಆಝಾನ್ ಮಾಡುವ ವೇಳೆ ಧ್ವನಿವರ್ಧಕಗಳನ್ನು ಬಳಸುವುದರಿಂದ ಶಬ್ದ ಮಾಲಿನ್ಯ ಉಂಟಾಗುವುದಿಲ್ಲ ಎಂದು ಗುಜರಾತ್ ಹೈಕೋರ್ಟ ಮಹತ್ವದ ತೀರ್ಪು ನೀಡಿದೆ.
ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಕೋರ್ಟ ವಜಾಗೊಳಿಸಿದೆ.
ಗುಜರಾತ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ ಮತ್ತು ನ್ಯಾಯಮೂರ್ತಿ ಅನಿರುದ್ಧ ಪಿ ಮಯೀ ಅವರನ್ನೊಳಗೊಂಡ ವಿಭಾಗೀಯ ಪೀಠವು, ಅನುಮತಿಸಲ್ಪಟ್ಟ ಡೆಸಿಬಲ್ ನಲ್ಲಿ ಮಾನವ ಧ್ವನಿ ಮೂಲಕ ಆಝಾನ್ ಕರೆಯುವುದು ಹೇಗೆ ಶಬ್ದ ಮಾಲಿನ್ಯ ಉಂಟು ಮಾಡುತ್ತದೆ ಎಂದು ಪ್ರಶ್ನಿಸಿ, ಇದು ಸಂಪೂರ್ಣ ತಪ್ಪು ಗ್ರಹಿಕೆ ಎಂದು ಅರ್ಜಿಯನ್ನು ತಳ್ಳಿ ಹಾಕಿದೆ.
ಧ್ವನಿವರ್ಧಕಗಳ ಮೂಲಕ ಆಝಾನ್ ಕರೆಯುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಇದು ಜನರು ಮತ್ತು ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಮಸೀದಿಗಳ ಲೌಡ್ ಸ್ಪೀಕರ್ ಮೇಲೆ ನಿರ್ಬಂಧ ಹೇರಬೇಕೆಂದು ಕೋರಿ ಬಜರಂಗದಳದ ಮುಖಂಡ ಶಕ್ತಿಸಿಂಹ ಝಾಲಾ ಅವರು ಅರ್ಜಿ ಸಲ್ಲಿಸಿದ್ದರು.
ನಿಮ್ಮ ದೇವಾಲಯಗಳಲ್ಲಿ ಮುಂಜಾನೆ ಮೂರು ಗಂಟೆಗೆಲ್ಲ ತಬಲದೊಂದಿಗೆ ಬೆಳಗಿನ ಆರತಿ ಪ್ರಾರಂಭಗೊಳ್ಳುತ್ತದೆ. ಹಾಗಾದರೆ, ಇದು ಯಾರಿಗೂ ಯಾವುದೇ ಬಗೆಯ ಶಬ್ದವನ್ನು ಉಂಟು ಮಾಡುವುದಿಲ್ಲವೆ? ಎಂದು ಹೈಕೋರ್ಟ ಪ್ರಶ್ನಿಸಿದೆ. ಘಂಟೆ ಹಾಗೂ ಜಾಗಟೆಯ ಶಬ್ದ ದೇವಾಲಯದ ಆವರಣದಲ್ಲಿ ಮಾತ್ರ ಉಳಿಯುತ್ತದೆ ಎಂದು ನೀವು ಹೇಳಬಲ್ಲಿರಾ? ಅದು ದೇವಾಲಯದ ಹೊರಗೂ ಧ್ವನಿಸುವುದಿಲ್ಲವೆ?” ಎಂದು ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರನ್ನು ನ್ಯಾಯಾಲಯವು ಪ್ರಶ್ನಿಸಿತು.
ಬೆಳಿಗ್ಗೆ ಧ್ವನಿವರ್ಧಕದ ಮೂಲಕ ಆಝಾನ್ ಮಾಡುವ ಮಾನವ ಧ್ವನಿಯು ಶಬ್ದ ಮಾಲಿನ್ಯವನ್ನು ಉಂಟು ಮಾಡುವ ಮಟ್ಟವನ್ನು ಹೇಗೆ ಸಾಧಿಸುತ್ತದೆ ಮತ್ತು ಇದು ಸಾರ್ವಜನಿಕರಿಗೆ ಆರೋಗ್ಯದ ಅಪಾಯವನ್ನು ಹೇಗೆ ಉಂಟುಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ ಎಂದೂ ನ್ಯಾಯಾಲಯ ಹೇಳಿದೆ.