ಹೊಸದಿಲ್ಲಿ : ಆಸ್ಪತ್ರೆಯಲ್ಲಿ ಕೂದಲು ಕಸಿ ಮಾಡಿಸಿಕೊಂಡ ನಂತರ ಉಂಟಾದ ಅಡ್ಡ ಪರಿಣಾಮಗಳಿಂದ ವ್ಯಕ್ತಿಯೊಬ್ಬರು ಅಸುನೀಗಿದ ಘಟನೆ ದೆಹಲಿಯಲ್ಲಿ ಸಂಭವಿಸಿದೆ.
ಹಣೆಯ ಮೇಲ್ಭಾಗದ ಕೂದಲೂದುರಿ ಸ್ವಲ್ಪ ಬೋಳಾಗಿದ್ದ 30 ವರುಷದ ಅಥರ್ ರಶೀದ ಎಂಬವರು ಆಸ್ಪತ್ರೆಯೊಂದರಲ್ಲಿ ಕೂದಲು ಕಸಿ ಮಾಡಿಸಿಕೊಳ್ಳಲು ಇತ್ತೀಚಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ನಂತರ ಅವರ ಶರೀರದಲ್ಲಿ ಚಿಕಿತ್ಸೆಯ ಅಡ್ಡ ಪರಿಣಾಮದಿಂದ ಬಹು ಅಂಗಾಂಗ ವೈಫಲ್ಯ ಉಂಟಾಗಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ರಶೀದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ರಶೀದ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಅವರು ಕುಟುಂಬದಲ್ಲಿ ಏಕೈಕ ಅನ್ನದಾತರಾಗಿದ್ದರು. ಕೂದಲು ಕಸಿ ಶಸ್ತ್ರಚಿಕಿತ್ಸೆಯಿಂದ ತನ್ನ ಮಗ ತುಂಬಾ ನೋವಿನಿಂದ ಮೃತಪಟ್ಟಿದ್ದಾನೆ ಎಂದು ರಶೀದ ಅವರ ತಾಯಿ ಆಸಿಯಾ ಬೇಗಂ ಹೇಳಿದ್ದಾರೆ.
ಶಸ್ತ್ರ ಚಿಕಿತ್ಸೆ ನಂತರ ರಶೀದ ಅವರ ದೇಹದಾದ್ಯಂತ ದದ್ದುಗಳು ಆದವು. ಹಾಗಾಗಿ ಅವರ ಕುಟುಂಬ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯಕೀಯ ಸಿಬ್ಬಂದಿ ವಿರುದ್ಧ ಪೊಲೀಸರಲ್ಲಿ ದೂರನ್ನು ನೀಡಿದ್ದರು.
ಕೂದಲು ಕಸಿ ಮಾಡುವುದು ತಪ್ಪು ಎಂದು ಜನರಿಗೆ ತಿಳಿವಳಿಕೆ ನೀಡಲು ಪೊಲೀಸ್ ದೂರು ನೀಡಿದ್ದೇನೆ ಎಂದು ರಶೀದ ತಾಯಿ ಆಸಿಯಾ ಬೇಗಂ ಹೇಳಿದ್ದಾರೆ. ತನ್ನಂತೆ ಬೇರೆ ಯಾವ ತಾಯಿಯೂ ತನ್ನ ಮಗನನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಅವರು ಹೇಳಿದರು. ಕೂದಲು ಕಸಿ ಮಾಡುವಿಕೆ ಒಂದು ಮೋಸ, ಅದನ್ನು ಯಾರೂ ಮಾಡಿಸಿಕೊಂಡು ನನ್ನ ಕುಟುಂಬದಂತೆ ದುಃಖಿಸಬೇಡಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.