ಬೆಂಗಳೂರು: ಕರ್ನಾಟಕದಲ್ಲಿ ಜಾತಿ–ಧರ್ಮಗಳ ಹೆಸರಿನಲ್ಲಿನ ಭೇದವನ್ನು ತೊಡೆದು ಹಾಕಲಾಗುವುದು. ದ್ವೇಷರಹಿತ, ಪ್ರೀತಿಯುಕ್ತ ಸಮಾಜ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಹಲವು ಬಗೆಯ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯಪಾಲ ಥಾವರಚಂದ ಗೆಹ್ಲೋಟ ಹೇಳಿದರು.
ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸೋಮವಾರ ವಿಧಾನಸಭೆ ಅಧಿವೇಶನ ಆರಂಭ ಆಗಿದ್ದು ಈ ಸಂದರ್ಭದಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದರು. ಸಂಕುಚಿತ ಮನಸ್ಸುಗಳು ವಿವಿಧ ಸಮುದಾಯಗಳ ನಡುವೆ ಒಡಕು ಮತ್ತು ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುತ್ತವೆ. ಅಂತಹ ಮನಃಸ್ಥಿತಿಯ ಜನರು ಸಮಾಜದ ವಿವಿಧ ಹಂತಗಳಲ್ಲಿ ಇನ್ನೂ ಉಳಿದಿದ್ದಾರೆ. ಆದರೆ ಶಾಂತಿಯುತ ಮತ್ತು ಪರಸ್ಪರ ಪ್ರೀತಿಸುವ ಸಮಾಜವನ್ನು ನಿರ್ಮಿಸಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ಬಸವಣ್ಣನ ತತ್ವದಡಿ ರಾಜ್ಯ ಸರ್ಕಾರ ನಡೆಯುತ್ತಿದೆ. ಸರ್ಕಾರ ಎಲ್ಲಾ ಸಮುದಾಯಗಳ ಪರವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಕುವೆಂಪು ಅವರ ಸರ್ವಜನಾಂಗದ ಶಾಂತಿ ತೋಟ ತತ್ವದಡಿ ಕೆಲಸ ಮಾಡುತ್ತಿದ್ದೇವೆ. ಬಸವಣ್ಣ, ಸರ್ವಜ್ಞ ಸೇರಿ ಅನೇಕ ಸಂತರು ಶಾಂತಿ ತತ್ವ ಪಾಲನೆ ಮಾಡಲಾಗುತ್ತಿದೆ. ಶಾಂತಿಯುತ, ಸಮೃದ್ಧ, ಸೌಹಾರ್ದಯುತವಾದ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ. ಯಾರನ್ನೂ ಹೊರಗಿಡದೇ ಎಲ್ಲರನ್ನೂ ಒಳಗೊಂಡು ‘ಇವ ನಮ್ಮವ’ ಎಂದು ಕೂಡಿ ಬಾಳುವ ನಮ್ಮ ಹಿರಿಯರ ಕನಸನ್ನು ನನಸು ಮಾಡಲು ನನ್ನ ಸರ್ಕಾರ ಬದ್ಧವಾಗಿದೆ ಅವರು ಹೇಳಿದರು.
ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಜನಸ್ನೇಹಿ ಮತ್ತು ನಿಷ್ಪಕ್ಷಪಾತವಾದ ಪೊಲೀಸರ ಅಗತ್ಯವಿದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ಯೋಗಕ್ಷೇಮಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುವುದು. ಇದಕ್ಕಾಗಿ ಪೊಲೀಸ್ ಇಲಾಖೆಯನ್ನು ಮಹಿಳಾ ಮತ್ತು ಮಕ್ಕಳ ಸ್ನೇಹಿಯಾಗಿ ರೂಪಿಸಲಾಗುವುದು ಎಂದು ರಾಜ್ಯಪಾಲರು ನುಡಿದರು.
ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಬೇರೂರಿ ಹೋಗಿದೆ ಎಂದರೆ ಹಲವು ಕಾರಣಗಳಿಂದ ಅದು ಬಹುತೇಕ ಸಾಂಸ್ಥೀಕರಣಗೊಂಡಿದೆ. ಇದನ್ನು ನಿರ್ಮೂಲನೆ ಮಾಡುವುದು ದೊಡ್ಡ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ಮತ್ತು ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಉಭಯ ಸದನಗಳ ಸದಸ್ಯರಲ್ಲಿ ರಾಜ್ಯಪಾಲರು ಮನವಿ ಮಾಡಿಕೊಂಡರು. ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರವು ಅಗತ್ಯವಿರುವ ಎಲ್ಲಾ ಆಡಳಿತಾತ್ಮಕ ಮತ್ತು ಶಾಸಕಾಂಗ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದೂ ಅವರು ಹೇಳಿದರು.
ದೇಶದ ಅಭಿವೃದ್ಧಿಯಲ್ಲಿ ಸಾಕಷ್ಟು ಕೊಡುಗೆ ನೀಡಿರುವ ಕರ್ನಾಟಕ ರಾಜ್ಯವು ಒಂದು ರೀತಿಯ ಆರ್ಥಿಕ ಸಂಕಟದ ಸ್ಥಿತಿಯಲ್ಲಿ ನಿಂತಿದ್ದು ಈ ಸ್ಥಿತಿಯಿಂದ ರಾಜ್ಯವನ್ನು ಮೇಲೆತ್ತುವುದು ಸರ್ಕಾರದ ಆದ್ಯತೆಯಾಗಲಿದೆ. ಜನಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಕರ್ನಾಟಕದ್ದೇ ಆದ ಹೊಸ ಆಡಳಿತ ಮಾದರಿಯೊಂದನ್ನು ಕಾಂಗ್ರೆಸ್ ಸರ್ಕಾರ ದೇಶಕ್ಕೆ ಪರಿಚಯಿಸಲಿದೆ ಎಂದು ರಾಜ್ಯಪಾಲರು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ವಿತರಣೆಗೆ ಅಕ್ಕಿಯ ಕೊರತೆ ಎದುರಾಗಿದೆ. ಅಕ್ಕಿ ಲಭ್ಯವಾಗುವವರೆಗೂ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲಾಗುವುದು. ಇಂದಿರಾ ಕ್ಯಾಂಟೀನ್ಗಳನ್ನು ಇನ್ನೂ ಸಮರ್ಥವಾಗಿ ನಡೆಸಲಾಗುವುದು ಎಂದು ರಾಜ್ಯಪಾಲ ಗೆಹ್ಲೋಟ ಹೇಳಿದರು.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ರಾಜ್ಯಪಾಲರು, ಈ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಜನರ ಬದುಕು ಸುಧಾರಣೆ ಆಗಲಿದೆ ಎಂದು ಹೇಳಿದರು. ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ಹಸಿವು ಮುಕ್ತ ಕರ್ನಾಟಕ ರಾಜ್ಯ ಸ್ಥಾಪನೆಗೆ ಮಾಡಲಿದೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು ಮುಂತಾದವರ ಹಸಿವು ತಣಿಸಲು ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಹಣ ನೀಡಲು ಮುಂದಾಗಿದೆ.
ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಕೊಡಲಾಗುತ್ತದೆ. ಈ ಯೋಜನೆಯಿಂದ ಸುಮಾರು 2.14 ಕೋಟಿ ಕುಟುಂಬಕ್ಕೆ ಅನುಕೂಲ ಆಗಲಿದೆ. ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಹಾಕಲಾಗುತ್ತದೆ. ನನ್ನ ಸರ್ಕಾರ ಆಡಳಿತವನ್ನು ಪವಿತ್ರ ಕರ್ತವ್ಯ ಎಂದು ಪರಿಗಣಿಸುತ್ತದೆ. ಸರ್ಕಾರ ಬಡವರು, ಆರ್ಥಿಕ ಹಿಂದುಳಿದವರ ಪರವಾಗಿ ನಿಲ್ಲುತ್ತದೆ ಎಂದು ಗೆಹ್ಲೋಟ ಹೇಳಿದರು.
ಸಾರ್ವಜನಿಕ ಸಂಪತ್ತನ್ನು ಎಲ್ಲರಿಗೂ ಹಂಚಿಕೆ ಮಾಡುವ ಉದ್ದೇಶದಿಂದ ಜನಕೇಂದ್ರಿತ ಆರ್ಥಿಕತೆಯನ್ನು ಜಾರಿಗೆ ತರಲಾಗುವುದು. ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳನ್ನು ಸಮಾನ ದೃಷ್ಟಿಯಲ್ಲಿ ಪರಿಗಣಿಸಿ ಆಧುನಿಕ ಕರ್ನಾಟಕವನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
ಇದಕ್ಕೂ ಮೊದಲು ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲ ಥಾವರಚಂದ ಗೆಹ್ಲೋಟ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು. ಜುಲೈ ೭ ರಂದು ೧೪ನೇ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಗಡಪತ್ರ ಮಂಡಿಸಲಿದ್ದಾರೆ. ಒಟ್ಟು 10 ದಿನಗಳ ಕಾಲ ವಿಧಾನಮಂಡಲ ಜಂಟಿ ಮುಂಗಡಪತ್ರ ಅಧಿವೇಶನ ನಡೆಯಲಿದೆ.