ಬೈಕ್ ವೀಲ್ಹಿಂಗ್ ತಡೆದಿದ್ದಕ್ಕೆ ಪೊಲೀಸರನ್ನೇ ಥಳಿಸಿದರು!

A B Dharwadkar
ಬೈಕ್  ವೀಲ್ಹಿಂಗ್ ತಡೆದಿದ್ದಕ್ಕೆ ಪೊಲೀಸರನ್ನೇ ಥಳಿಸಿದರು!

ಗಂಗಾವತಿ: ಬೈಕ್ ನಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಪುಂಡರ ಗುಂಪನ್ನು ತಡೆದು ಬುದ್ಧಿ ಮಾತು ಹೇಳಿದ ಪೊಲೀಸರನ್ನೇ ಅಟ್ಟಾಡಿಸಿ ಥಳಿಸಿದ ಪ್ರಕರಣ ತಾಲೂಕಿನ ದಾಸನಾಳ ಸೇತುವೆ ಬಳಿ ಬುಧವಾರ ಸಂಜೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಮಗುಡ್ಡ ದಸರಾ ಹಬ್ಬದ ಬಂದೋಬಸ್ತ ಮುಗಿಸಿ ಪೊಲೀಸರು ವಾಪಸ್ ಆಗುವಾಗ ಗಾಂಜಾ ಮತ್ತಿನಲ್ಲಿ ರಸ್ತೆಯಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ನಗರದ ಯುವಕರ ಗುಂಪನ್ನು ಪೊಲೀಸರು ಪ್ರಶ್ನಿಸಿದರು. ಈ ವೇಳೆ ಪುಂಡರ ಗುಂಪು ಏಕಾಏಕಿ ಪೇದೆ ಬಸವರಾಜ ಪಾಟೀಲ ಹಾಗೂ ಪೊಲೀಸ್‌ ವಾಹನ ಚಾಲಕ ಕನಕಪ್ಪ ಉಪ್ಪಾರರನ್ನು ಮನಸೋ ಇಚ್ಛೆ ಥಳಿಸಿ‌ ವಿಡಿಯೋ ರೆಕಾರ್ಡ ಮಾಡುತ್ತಿದ್ದ ಪೊಲೀಸರ ಮೊಬೈಲ್ ಕಸಿದು ತುಂಗಭದ್ರಾ ಎಡದಂಡೆ ಕಾಲುವೆಗೆ ಎಸೆದಿದ್ದಾರೆ ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ದಾಸನಾಳ ಸೇತುವೆ ಹತ್ತಿರವಿದ್ದ ಸ್ಥಳೀಯರು ಗಲಾಟೆ ಬಿಡಿಸಲು ಯತ್ನಿಸಿದರೂ ಪುಂಡರ ಗುಂಪು ಕೈ ಗೆ ಸಿದ್ದ ಕಟ್ಟಿಗೆ, ಕಲ್ಲು ಇತರೆ ವಸ್ತುಗಳಿಂದ ಥಳಿಸಿದ್ದಾರೆ. ಆದರೂ ಪುಂಡರ ಪೈಕಿ ಗಂಗಾವತಿ ಗುಂಡಮ್ಮ ಕ್ಯಾಂಪಿನ ಮೂವರು ಯುವಕರ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಾಯಗೊಂಡ ಪೊಲೀಸರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:

ಗ್ರಾಮೀಣ ಠಾಣೆಯ ಪಿಎಸ್ಐ ಪುಂಡಪ್ಪ, ಮುಖ್ಯ ಪೇದೆ ಮೀಸೆ ಬಸವರಾಜ ಹಾಗೂ ಪೊಲೀಸ್ ವಾಹನ ಚಾಲಕ ಕನಕಪ್ಪ ಹೇಮಗುಡ್ಡ ದಸರಾ ಕರ್ತವ್ಯ ಮುಗಿಸಿ ಗಂಗಾವತಿಗೆ ಆಗಮಿಸುತ್ತಿದ್ದಾಗ ಕೊಪ್ಪಳದ ಕಡೆಯಿಂದ ಗುಂಡಮ್ಮ ಕ್ಯಾಂಪಿನ ಯುವಕರ ಪಡೆ ವೀಲ್ಹಿಂಗ್ ಮಾಡಿಕೊಂಡು ಪೊಲೀಸರ ವಾಹನ ಓವರ್ ಟೇಕ್ ಮಾಡಿ ಮುಂದೆ ಹೋಗಿ ಸ್ಕಿಡ್ ಆಗಿ ಬಿದ್ದಿದ್ದಕ್ಕೆ ಪೊಲೀಸರು ತಕ್ಷಣ ಅವರ ರಕ್ಷಣೆಗೆ ಧಾವಿಸಿದ್ದಾರೆ. ರಕ್ಷಣೆಗೆ ಬಂದ ಪೊಲೀಸರು ಬುದ್ಧಿ ಹೇಳಲು ಮುಂದಾದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗಾಂಜಾ ಮತ್ತಿನಲ್ಲಿದ್ದ ಅವರೆಲ್ಲ ಏಕಾಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದೆ. ಅರ್ಬಾಜ, ವೆಂಕಟೇಶ, ಪಂಪನಗೌಡ ಎಂಬ ಮೂವರು ಆರೋಪಿಗಳು ಪೊಲೀಸರ ವಶದಲ್ಲಿದ್ದು ಇನ್ನುಳಿದವರು ಓಡಿ ಹೋದರು ಎಂದರು ಪೊಲೀಸರು ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.