ಕೊಲ್ಹಾಪುರ : ಆತ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಜಿಗಿದದ್ದು ನದಿಗೆ ಆದರೆ ಸಿಕ್ಕಿ ಬಿದ್ದಿದ್ದು ನದಿಯಲ್ಲಿನ ಮರದ ಟೊಂಗೆಗೆ. ಸುಮಾರು 13-ತಾಸು ನದಿಯಲ್ಲಿನ ಮರದ ಟೊಂಗೆಯ ಮೇಲೆ ಕಳೆದ ಅವರನ್ನು ಇಂದು ಮುಂಜಾನೆ 10-ಗಂಟೆ ಸುಮಾರಿಗೆ ರಕ್ಷಿಸಲಾಗಿದೆ.
ಈ ಘಟನೆ ನಡೆದದ್ದು ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ. ಸುಮಾರು 35 ವರುಷದ ಜಯವಂತ ಕಾಮಕರ ಎಂಬವರು ನಿನ್ನೆ ಗುರುವಾರ ರಾತ್ರಿ ಸುಮಾರು 9 ಗಂಟೆಗೆ ಕೊಲ್ಹಾಪುರ ನಗರದ ಅಂಚಿನಲ್ಲಿ ಹರಿಯುವ ವಾರಣಾ ನದಿಗೆ ಕಟ್ಟಿರುವ ಸೇತುವೆ ಮೇಲೆ ಬಂದು, ತಮ್ಮ ಬೈಕನ್ನು ಸೇತುವೆಯ ಒಂದು ಬದಿಗೆ ನಿಲ್ಲಿಸಿ ನದಿಗೆ ಜಿಗಿದಿದ್ದರು. ನೀರಿನ ಪ್ರವಾಹದಿಂದ ಮುಂದೆ ತೇಲುತ್ತ ಮುಳುಗುತ್ತ ನದಿಯಲ್ಲಿನ ಮರವೊಂದರ ಟೊಂಗೆಗೆ ಸಿಕ್ಕಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಲೆಂದೇ ನದಿಗೆ ಹಾರಿದ್ದ ಅವರು ಚಳಿಯಿಂದ ನಡುಗುತ್ತ, ನೀರಿನ ಪ್ರವಾಹದ ರಭಸ ಕಂಡು ಹೆದರಿ ಚೀರಾಡಿ, ಕೂಗಾಡಿ ಜನರ ಗಮನ ಸೆಳೆಯುವ ಯತ್ನ ಮಾಡಿದ್ದಾರಾದರೂ ಯಾರೂ ಕೇಳಿಲ್ಲ. ಇಂದು ಮುಂಜಾನೆ ಮರದ ಟೊಂಗೆಗೆ ಸಿಲುಕಿ, ಕೂಗಲೂ ಆಗದೇ ನಿತ್ರಾಣರಾಗಿದ್ದ ಅವರನ್ನು ಕಂಡ ಜನರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಕೊಲ್ಹಾಪುರ ಜಿಲ್ಲಾ ಆಪತ್ತು ನಿರ್ವಹಣಾ ಘಟಕಕ್ಕೆ (ಡಿಸಾಸ್ಟರ್ ಮ್ಯಾನೇಜಮೆಂಟ ಸೆಲ್ ) ತಿಳಿಸಿದ್ದಾರೆ. ಅವರು ಬಂದು ಈ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ನದಿಯಿಂದ ರಕ್ಷಿಸಿ ಪುನಃ ಸೇತುವೆ ಮೇಲೆ ಕರೆತಂದು ಉಪಚರಿಸಿದಾಗ ಚೇತರಿಸಿಕೊಂಡ ಜಯವಂತನು, ತಾನು ಸೇತುವೆ ಮೇಲಿನಿಂದ ಹರಿಯುವ ನೀರಿನ ರಭಸ ನೋಡಲು ಬಂದು ಸೇತುವೆಯ ಒಂದು ಬದಿ ಬೈಕ್ ನಿಲ್ಲಿಸಿ ಕೆಳಗೆ ನೀರನ್ನು ನೋಡಲು ಬಗ್ಗಿದ್ದಾಗ ನಿಯಂತ್ರಣ ತಪ್ಪಿ ನದಿಗೆ ಬಿದ್ದುದಾಗಿಯೂ, ಹರಿಯುವ ನೀರಿನ ರಭಸಕ್ಕೆ ತೇಲಿಹೋಗಿ ನದಿಯಲ್ಲಿನ ಮರದ ಟೊಂಗೆಗೆ ಸಿಲುಕಿದ್ದಾಗಿಯೂ ತಿಳಿಸಿದ್ದ. ಆತ್ಮಹತ್ಯೆಯಂತಹದೇನಿಲ್ಲ ಎಂದು ಹೇಳಿದ್ದ.
ನಂತರ ಅವರನ್ನು ಕೊಲ್ಹಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳಲೆಂದೇ ನದಿಗೆ ಜಿಗಿದದ್ದು ಎಂದು ತಿಳಿಸಿದ್ದಾರೆ.
ಕೊಲ್ಹಾಪುರದಲ್ಲೂ ಕಳೆದ 10 ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಭಾರತೀಯ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿರುವುದರಿಂದ ಸಂಪೂರ್ಣ ಜಿಲ್ಲೆಯಲ್ಲಿ ‘ರೆಡ್ ಅಲರ್ಟ ‘ ಘೋಷಿಸಲಾಗಿದೆ.