ಕಳಪೆ ಗುಣಮಟ್ಟದ ಮನೆ ಕಟ್ಟಿಕೊಟ್ಟ ಬಿಲ್ಡರ್ ಗೆ ಭಾರಿ ದಂಡ

A B Dharwadkar
ಕಳಪೆ ಗುಣಮಟ್ಟದ ಮನೆ ಕಟ್ಟಿಕೊಟ್ಟ ಬಿಲ್ಡರ್ ಗೆ ಭಾರಿ ದಂಡ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಧಾರವಾಡ: ಕಳಪೆ ಗುಣಮಟ್ಟದ ಮನೆ ಕಟ್ಟಿಕೊಟ್ಟ ಬಿಲ್ಡರ್ ಗೆ 4 ಲಕ್ಷ ದಂಡ ಸೇರಿ ಒಟ್ಟು 5.10 ಲಕ್ಷ  ರೂ. ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಹುಬ್ಬಳ್ಳಿಯ ದೇವಾಂಗ ಪೇಟೆಯಲ್ಲಿರುವ ತನ್ನ ಪ್ಲಾಟ್ ನಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಕೊಡುವಂತೆ ನಿವೃತ್ತ ಪೋಲಿಸ್ ನೌಕರ ಶಂಕರ ಕೆರಕಣ್ಣವರ ಹುಬ್ಬಳ್ಳಿಯ ಪ್ರಶಾಂತ ಲೋಕಾಪೂರ ಹಾಗೂ ಗಾಯಿತ್ರಿ ಲೋಕಾಪೂರ ಬಿಲ್ಡರವರ ಜೊತೆ ಒಪ್ಪಂದ ಮಾಡಿಕೊಂಡಿದ್ದರು.

ಅದರ ಪ್ರಕಾರ ದೂರುದಾರ 25 ಲಕ್ಷ ರೂಪಾಯಿ ಸಂದಾಯ ಮಾಡಿದ್ದರು. ಬಿಲ್ಡರ್ ಗಳು ಕಡಿಮೆ ಗುಣಮಟ್ಟದ ಕಳಪೆ ಸಾಮಗ್ರಿಗಳನ್ನು ಮನೆ ಕಟ್ಟಲು ಉಪಯೋಗಿಸಿ ಮನೆ ಕಟ್ಟಿದ್ದರಿಂದ ಈಗ ಮನೆಯಲ್ಲಿ ಲಿಕೇಜ ಬಂದು ಮನೆಯ ಪರಿಕರಗಳು ಕೆಟ್ಟು ಹೋಗಿ ತಮ್ಮ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ ಮತ್ತು ಕಳಪೆ ಗುಣಮಟ್ಟದ ಮನೆ ನಿರ್ಮಾಣದಿಂದ ತನಗೆ ಆರ್ಥಿಕ ಹಾನಿ, ಮಾನಸಿಕ ತೊಂದರೆಯಾಗಿದೆ. ಕಾರಣ ಬಿಲ್ಡರ್ ಗಳು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಅವರಿಂದ 5 ಲಕ್ಷ ರೂಪಾಯಿ ಪರಿಹಾರ, 2 ಲಕ್ಷ ರೂಪಾಯಿ ಮಾನಸಿಕ ತೊಂದರೆಗೆ ಪರಿಹಾರ ಬಡ್ಡಿ ಸಮೇತ ಕೊಡಿಸುವಂತೆ ದೂರುದಾರ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಬಿಲ್ಡರ್ ಗಳು ವಕೀಲರ ಮೂಲಕ ಹಾಜರಾಗಿ ತಾವೇ ಸುಮಾರು 2.5 ಲಕ್ಷ ಮೊತ್ತದ ಹೆಚ್ಚುವರಿ ಕೆಲಸ ಮಾಡಿಕೊಟ್ಟಿದ್ದು, ತಮ್ಮಿಂದ ಯಾವುದೇ ಸೇವಾ ನ್ಯೂನ್ಯತೆ ಆಗಿಲ್ಲ ಎಂದು ಹೇಳಿ ಈ ದೂರನ್ನು ವಜಾ ಮಾಡುವಂತೆ ಕೋರಿದ್ದರು.

ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವ್ಹಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ. ಹಿರೇಮಠ ಅವರು, ಕಟ್ಟಡದ ನಿರ್ಮಾಣ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಲಾಗಿದೆಯೋ ಅಥವಾ ಇಲ್ಲವೋ ಅನ್ನುವುದನ್ನು ತಿಳಿದುಕೊಳ್ಳಲು ಧಾರವಾಡದ ಅರವಿಂದ ಕಪಲಿ ಅನ್ನುವ ಸ್ವತಂತ್ರ ಸಿವಿಲ್ ಇಂಜನೀಯರರವನ್ನು ನೇಮಿಸಿ ಅವರಿಂದ ಕಟ್ಟಡ ಕಾಮಗಾರಿಯ ಬಗ್ಗೆ ಗ್ರಾಹಕರ ಆಯೊಗ ವಿವರವಾದ ವರದಿ ತರಿಸಿಕೊಂಡಿತ್ತು. ಅವರ ವರದಿಯನ್ನು ಆಧರಿಸಿ ಬಿಲ್ಡರ್‍ಗಳ ಕೋರಿಕೆಯನ್ನು ತಳ್ಳಿಹಾಕಿ ಉಭಯತರ ಮಧ್ಯೆ ಆಗಿರುವ ಕಟ್ಟಡ ನಿರ್ಮಾಣದ ಒಪ್ಪಂದ ಪತ್ರದಲ್ಲಿರುವ ಷರತ್ತಿಗೆ ವಿರುದ್ಧವಾಗಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಿ ಮನೆ ನಿರ್ಮಿಸಿಕೊಟ್ಟು ದೂರುದಾರನಿಗೆ ಮತ್ತು ಅವರ ಕುಟುಂಬದವರಿಗೆ ತೊಂದರೆ ಉಂಟು ಮಾಡಿ ಬಿಲ್ಡರ್ ಗಳು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ತೀರ್ಪು ನೀಡಿದ್ದಾರೆ.

ಈ ತಪ್ಪಿಗೆ ಬಿಲ್ಡರಗಳು ದೂರುದಾರನ ಮನೆಯ ದುರಸ್ತಿ ಮತ್ತು ಇತರೇ ಖರ್ಚಿಗೆ 4 ಲಕ್ಷ ರೂಪಾಯಿ ದಂಡದ ರೂಪದಲ್ಲಿ ಪರಿಹಾರ ಕೊಡುವಂತೆ ಮತ್ತು ಕಳಪೆ ಮನೆ ನಿರ್ಮಾಣದಿಂದ ದೂರುದಾರ ಮತ್ತು ಅವರ ಕುಟುಂಬದವರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ 1 ಲಕ್ಷ ರೂಪಾಯಿ ಪರಿಹಾರ ಹಾಗೂ 10 ಸಾವಿರ ರೂಪಾಯಿ ಈ ಪ್ರಕರಣದ ಖರ್ಚು ವೆಚ್ಚ ಕೊಡಲು ಆದೇಶಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.