ಬಾಗಲಕೋಟ : ಕಬ್ಬು ಬೆಳೆಗೆ ನಿಗದಿತ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಇನ್ನಷ್ಟು ತೀವ್ರಗೊಂಡಿದೆ. ಬಾಗಲಕೋಟದ ಗದ್ದನಕೇರಿ ಕ್ರಾಸ್ನ್ನು ಬಂದ್ ಮಾಡಿ ರೈತರು ಪ್ರತಿಭಟನೆ ಮಾಡಿದರು.
ಗದ್ದನಕೇರಿ ಕ್ರಾಸ್ ಬಂದ್ ಮಾಡಿರುವುದರಿಂದ ಹುಬ್ಬಳ್ಳಿ-ಸೊಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು. ಅದರಂತೆ ಹುಬ್ಬಳ್ಳಿ- ಸೊಲ್ಲಾಪುರ, ಬೆಳಗಾವಿ- ರಾಯಚೂರು ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಂಚಾರವೇ ಇಲ್ಲದಾಗಿತ್ತು.
ಬೀಳಗಿ, ಮುಧೋಳ ಭಾಗದ ರೈತರು ಬಂದು ಪ್ರತಿಭಟನೆ ನಡೆಸುತ್ತಿರುವುದರಿಂದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಚಾರವೇ ಸ್ತಬ್ಧಗೊಂಡಿದೆ.
ಅಲ್ಲದೇ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಅನಗವಾಡಿ ಸೇತುವೆಯನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಸೇತುವೆಯಲ್ಲಿ ನೂರಾರು ವಾಹನಗಳು, ರಸ್ತೆಯಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತವು. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.