ಕುಮಟಾ, ೧೩: ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯಂತೆ ರಾಜ್ಯದ ಕೆಲ ಮಸೀದಿಗಳನ್ನು ಕೆಡವಿ ಹಾಕುವ ಮೂಲಕ ಹಿಂದೂ ಸಮುದಾಯಕ್ಕೆ ಆದ ಅಪಮಾನಕ್ಕೆ ಸೇಡು ತೀರಿಸಿಕೊಳ್ಳುವ ವರೆಗೆ ಸುಮ್ಮನೆ ಕುಳಿತುಕೊಳ್ಳಬಾರದು ಎಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕುಮಟಾದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಬಾಬ್ರಿ ಮಸೀದಿ ನಿರ್ನಾಮವಾದಂತೆ ಭಟ್ಕಳದ ಚಿನ್ನದ ಪಳ್ಳಿಯೂ ಆಗಲಿದೆ. ಇದನ್ನು ಬೇಕಾದರೆ ಬೆದರಿಕೆ ಅಂತ ಬೇಕಾದರೂ ತಿಳಿಯಿರಿ. ಇದು ಹಿಂದೂ ಸಮಾಜದ ತೀರ್ಮಾನವೇ ವಿನಃ ಅನಂತಕುಮಾರ ಹೆಗಡೆ ತೀರ್ಮಾನ ಅಲ್ಲ. ಸಿರಸಿಯ ಸಿಪಿ ಬಜಾರನಲ್ಲಿಯೂ ಮಸೀದಿ ಈ ಹಿಂದೆ ವಿಜಯ ವಿಠ್ಠಲ ದೇವಸ್ಥಾನ ಆಗಿತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನವಾಗಿತ್ತು. ಇವತ್ತೂ ಅಲ್ಲಿಗೆ ಹೋದರೆ ಮಾರುತಿ ದೇವಸ್ತಾನ ಕಾಣುತ್ತದೆ ಎಂದು ಅನಂತಕುಮಾರ ಹೇಳಿದರು.
ಶಿರಸಿಯ ಸಿಪಿ ಬಜಾರ್ನಲ್ಲಿರುವ ಮಸೀದಿ, ಅದು ವಿಜಯ ವಿಠ್ಠಲ ದೇವಸ್ಥಾನ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಕೂಡು ಮಾರುತಿ ದೇವಸ್ಥಾನ. ಇದೇ ರೀತಿ ದೇಶದ ಹಳ್ಳಿಯ ಮೂಲೆ-ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ, ಅದನ್ನು ಕಿತ್ತುಹಾಕುವ ತನಕ ಹಿಂದೂ ಸಮಾಜ ಸುಮ್ಮನೆ ಇರೊಲ್ಲ. ಈಗ ರಣಭೈರವ ಎದ್ದಾಗಿದೆ. ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಹಿಂದೂ ಧರ್ಮ ಯಾರ ಋಣವನ್ನು ಇಟ್ಟುಕೊಳ್ಳುವ ಧರ್ಮವಲ್ಲ, ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದಿದ್ದರೇ ಇದು ಹಿಂದೂ ರಕ್ತವೇ ಅಲ್ಲ ಎಂದರು.
ಶತಮಾನಗಳಿಂದಲೂ ಹಿಂದೂ ಸಮಾಜವನ್ನು ಒಡೆಯುತ್ತಲೇ ಬರುತ್ತಿದ್ದಾರೆ. ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ. ಹಿಂದೂ ವಿರೋಧಿಗಳು, ಸನಾತನ ಧರ್ಮ ವಿರೋಧಿಗಳು ನಮ್ಮ ವಿರೋಧಿಗಳು. ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ, ಸಿಎಂ ಸಿದ್ದರಾಮಯ್ಯ ನಮ್ಮ ವಿರೋಧಿ. ಅಲ್ಪಸಂಖ್ಯಾತರ ಮತಕ್ಕಾಗಿ ಹರಾಜಾಗಿ ಹೋದವರು ನಮ್ಮ ವಿರೋಧಿಗಳು ಎಂದು ಹೆಗಡೆ ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಮೊದಲು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯ ಆಹ್ವಾನ ಬಂದಿಲ್ಲ ಎಂದರು, ಆಹ್ವಾನ ಬಂದ ಮೇಲೆ ನಾನು ಹೋಗುವುದಿಲ್ಲ ಎಂದರು. “ನೀನು ಬಾ ಅಥವಾ ಬಿಡು, ರಾಮ ಜನ್ಮಭೂಮಿಯಲ್ಲಿ ಏನೂ ನಿಲ್ಲೋದಿಲ್ಲ ಮಗನೇ” ಎಂದು ನಿಂದಿಸಿದರು. ಮೊದಲಿಗೆ ಜನವರಿ 22ಕ್ಕೆ ಅಯೋಧ್ಯೆಗೆ ಹೋಗುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ನಂತರ ಹೋಗುತ್ತೇನೆ ಎಂದು ಹೇಳಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು, ದಮ್ ಎಂದು ಹೆಗಡೆ ಹೇಳಿದರು.