ಬೆಳಗಾವಿ, ೭- ಕೆಟ್ಟು ಹೋಗಿದ್ದ ವಿದ್ಯುತ್ ಪ್ರವಾಹಕ (ಟ್ರಾನ್ಸಫಾರ್ಮರ್) ತೆಗೆದು ಹೊಸದೊಂದನ್ನು ಸ್ಥಾಪಿಸುವ ಕುರಿತು ರೈತರಿಗೆ ಸುಳ್ಳು ಭರವಸೆ ನೀಡಿದ್ದ ಕುರಿತು ತಪ್ಪೊಪ್ಪಿಕೊಂಡ ಹೆಸ್ಕಾಂ, ರೈತ ಸಂಘಟನೆಗೆ 3,000 ರೂಪಾಯಿ ದಂಡ ನೀಡಿ, ತಪ್ಪೊಪ್ಪಿಗೆ ಪತ್ರವನ್ನೂ ನೀಡಿದೆ ಎಂದು ರೈತರು ತಿಳಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ವಿದ್ಯುತ್ ಪ್ರವಾಹಕವೊಂದು ಸೋಮವಾರ (ಸೆಪ್ಟೆಂಬರ್ 4) ರಂದು ಕೆಟ್ಟು ಹೋಗಿತ್ತು. ರೈತರು “ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ” ಯ ಮುಖಾಂತರ ಬೆಳಗಾವಿಯ ಹೆಸ್ಕಾಂ ಕಚೇರಿಗೆ ಮಾಹಿತಿ ನೀಡಿ, ಹೊಸದೊಂದನ್ನು ಅಳವಡಿಸಲು ವಿನಂತಿಸಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ್ದ ಅಧಿಕಾರಿಗಳು ಮರುದಿನವೇ ಹೊಸ ಪ್ರವಾಹಕ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು.
ಮರುದಿನ ಸಂಘದ ಹತ್ತು ಸದಸ್ಯರು ನಿತ್ಯದ ಕೃಷಿ ಕೆಲಸಕ್ಕೆ ತೆರಳದೇ ಪ್ರವಾಹಕ ಬರುವುದನ್ನೇ ಕಾಯುತ್ತಿದ್ದರು. ಹೇಳಿದ ಸಮಯಕ್ಕೆ ಬಾರದ ಕಾರಣ ಫೋನ್ ಮಾಡಿದ್ದಕ್ಕೆ ಪ್ರವಾಹಕವನ್ನು ಟ್ರಕ್ ನಲ್ಲಿ ಹಾಕಲಾಗಿದೆ, ಕೆಲವೇ ನಿಮಿಷಗಳಲ್ಲಿ ತಮ್ಮ ಗ್ರಾಮಕ್ಕೆ ತೆರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಆ ದಿನ ಟ್ರಾನ್ಸಫಾರ್ಮರ್ ಬರಲೇ ಇಲ್ಲ.
ಮರುದಿನ ಸುಳ್ಳು ಹೇಳಿದ್ದಕ್ಕೆ ಅಧಿಕಾರಿಗಳನ್ನು ಸಂಪರ್ಕಿಸಿ ದಬಾಯಿಸಿದ ರೈತರು ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದಾಗ ವಿದ್ಯುತ್ ಪ್ರವಾಹಕವನ್ನು ಗ್ರಾಮಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ತಮಗೆ ಸುಳ್ಳು ಮಾಹಿತಿ ನೀಡಿ ತಮ್ಮ ಒಂದು ದಿನ ಕಾಯುವಿಕೆಯಲ್ಲಿ ವ್ಯರ್ಥವಾಗಿ ಕಳೆಯುವಂತೆ ಮಾಡಿದ್ದ ಅಧಿಕಾರಿಗಳ ವಿರುದ್ಧ ರೋಷಗೊಂಡಿದ್ದ ರೈತರು “ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರವಾಹಕವನ್ನು ಟ್ರಕ್ ನಿಂದ ಕೆಳಗೆ ಇಳಿಸಲು ಬಿಡುವುದಿಲ್ಲ, ಹಾಗೆಯೇ ಟ್ರಕ್ ಹಿಂದಿರುಗಿ ಹೋಗಲೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಆಗ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು, “ತಮ್ಮ ಹೇಳಿಕೆ ನಂಬಿ ಹತ್ತು ರೈತರು ತಮ್ಮ ಕೃಷಿ ಕೆಲಸಕ್ಕೆ ಹೋಗದೇ ಟ್ರಾನ್ಸಫಾರ್ಮರಗಾಗಿ ಇಡೀ ದಿನ ಕಾದಿದ್ದಾರೆ. ಅವರ ದಿನದ ಕೂಲಿ ದಿನಕ್ಕೆ 300 ರೂಪಾಯಿಯಂತೆ ಒಟ್ಟು 3,000 ರೂಪಾಯಿಯಾಗುತ್ತದೆ. ಅದನ್ನವರು ಕಳೆದುಕೊಂಡಿದ್ದಾರೆ. ಆ ಕೂಲಿಯ ಹಾನಿಯನ್ನು ಭರಸಿದರೆ ಮತ್ತು ತಮ್ಮ ಸುಳ್ಳಿಗೆ ಲಿಖಿತದಲ್ಲಿ ಬರೆದುಕೊಟ್ಟರೆ ಮಾತ್ರ ಪ್ರವಾಹಕ ಅಳವಡಿಸಲು ಅನುಮತಿಸುವುದಾಗಿ, ಇಲ್ಲದಿದ್ದರೆ ಟ್ರಕ್ ಮಾತ್ರವಲ್ಲ, ನಿಮ್ಮನ್ನೂ ಗ್ರಾಮದಿಂದ ಹೋಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಆಗ ದಿನಕ್ಕೆ ಪ್ರತಿಯೊಬ್ಬರಿಗೆ 300 ರೂಪಾಯಿ ಕೂಲಿಯಂತೆ ಹತ್ತು ರೈತರ ಒಟ್ಟು ಕೂಲಿ 3,000 ರೂಪಾಯಿ ನೀಡಿ, ತಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಲಿಖಿತ ಪತ್ರವನ್ನೂ ಹೆಸ್ಕಾಂ ಅಧಿಕಾರಿಗಳು ನೀಡಿದ್ದಾರೆ ಎಂದು ರೈತರು ತಿಳಿಸಿದ್ದಾರೆ.
ಈ ಕುರಿತು ಸಮದರ್ಶಿಗೆ ಮಾಹಿತಿ ನೀಡಿದ ರೈತ ಸಂಘದ ಬೆಳಗಾವಿ ತಾಲ್ಲೂಕು ಅಧ್ಯಕ್ಷ ಅಪ್ಪಾಸಾಹೇಬ ದೇಸಾಯಿ ಅವರು, “ಟ್ರಾನ್ಸಫಾರ್ಮರ್ ಸ್ಥಾಪಿಸುವವರು ಅಧಿಕಾರಿಗಳು ಸೂಚಿಸಿದ ಸ್ಥಳಕ್ಕೆ ತೆರಳದೇ ತಮಗೆ ಹಣ ನೀಡುವವರ ಬಳಿ ಅದರಲ್ಲೂ ಉದ್ಯಮಗಳಲ್ಲಿ ಸ್ಥಾಪಿಸುತ್ತಾರೆ. ಇದಕ್ಕೆ ಅಧಿಕಾರಿಗಳಿಗೆ ಒಂದಿಲ್ಲೊಂದು ಸುಳ್ಳು ನೆಪ ಹೇಳುತ್ತಾರೆ. ಬೆಳಗಾವಿ ಸಮೀಪದಲ್ಲಿರುವ ನಮ್ಮ ಗ್ರಾಮಕ್ಕೆ ಕೆಟ್ಟು ಹೋಗಿದ್ದ ಪ್ರವಾಹಕವನ್ನು ಸ್ಥಾಪಿಸಲು ಮೂರು ದಿನ ತೆಗೆದುಕೊಂಡ ಹೆಸ್ಕಾಂನವರು ತಾಲ್ಲೂಕು ಕೇಂದ್ರದಿಂದ ದೂರವಿರುವ ಗ್ರಾಮಗಳಲ್ಲಿ ಸ್ಥಾಪಿಸಲು ಎಷ್ಟು ದಿನ ತೆಗೆದುಕೊಳ್ಳುತ್ತಾರೋ ನೀವೇ ಯೋಚಿಸಿ” ಎಂದು ತಿಳಿಸಿದರು.
ಈ ಕುರಿತು ಸಮದರ್ಶಿಗೆ ಎಇಇ ರಾಘವೇಂದ್ರ ಹುಲ್ಗರ್ ಪ್ರತಿಕ್ರಿಯೆ ನೀಡಿದ್ದು ರೈತರು ಮಾಡಿರುವ ಆರೋಪ ನಿರಾಕರಿಸಿದರು. “ರೈತರು ಶನಿವಾರ ಸಂಜೆ ಪ್ರವಾಹಕ ಕೆಟ್ಟಿರುವ ಕುರಿತು ಮಾಹಿತಿ ನೀಡಿದ್ದರು. ಭಾನುವಾರ ರಜೆ, ಸೋಮವಾರ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಮೂರು ಪ್ರವಾಹಕಗಳು ಏಕ ಕಾಲದಲ್ಲಿ ಕೆಟ್ಟಿದ್ದ ಕಾರಣ ತುರ್ತಾಗಿ ಅಲ್ಲಿ ಕೆಲಸ ಮಾಡಬೇಕಾಯಿತು. ಹಾಗಾಗಿ ಕಡೋಲಿ ಗ್ರಾಮದಲ್ಲಿ ಮಂಗಳವಾರ ಪ್ರವಾಹಕ ಜೋಡಿಸಲಾಯಿತು” ಎಂದು ಎಇಇ ತಿಳಿಸಿದರು.
ತಪ್ಪೊಪ್ಪಿಗೆ ಪತ್ರ ಕೊಟ್ಟಿಲ್ಲ -ಹೆಸ್ಕಾಂ
ರೈತರು ಹೊಲಕ್ಕೆ ತೆರಳದೇ ಒಂದು ದಿನ ಟ್ರಾನ್ಸಫಾರ್ಮರಗೆ ಕಾದು ಕುಳಿತಿದ್ದಕ್ಕೆ ಒಂದು ದಿನದ ಕೂಲಿಯಾಗಿ 10 ರೈತರಿಗೆ ದಿನಕ್ಕೆ 300 ರೂಪಾಯಿಯಂತೆ 3,000 ರೂಪಾಯಿ ನೀಡಲಾಗಿದೆ. ಅದು ದಂಡವಲ್ಲ. ಅಲ್ಲದೇ ಈ ಕುರಿತು ಇಲಾಖೆ ಯಾವುದೇ ತಪ್ಪೊಪ್ಪಿಗೆ ಪತ್ರ ಬರೆದು ಕೊಟ್ಟಿಲ್ಲವೆಂದು ಎಇಇ ಸ್ಪಷ್ಟಪಡಿಸಿದರು. (ಹೆಸ್ಕಾಂ ಬರೆದು ಕೊಟ್ಟಿದೆ ಎನ್ನಲಾದ ತಪ್ಪೊಪ್ಪಿಗೆ ಪತ್ರ ಸಮದರ್ಶಿ ನೋಡಿಲ್ಲ)
ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಕಳುಹಿಸಿಕೊಟ್ಟ ಪ್ರವಾಹಕಗಳನ್ನು ಕೆಳ ಹಂತದವರು ಉದ್ಯಮಿಗಳಿಗೆ ನೀಡುತ್ತಿರುವ ಆರೋಪ ತಮ್ಮ ಗಮನಕ್ಕೆ ಬಂದಿಲ್ಲವೆಂದೂ ಅವರು ತಿಳಿಸಿದರು.