ಬೆಂಗಳೂರು: ಪತಿಯ ಚೆಕ್ ಬೌನ್ಸ ಆದರೆ ಪತ್ನಿ ವಿರುದ್ಧ ಕೇಸ್ ದಾಖಲಿಸುವಂತಿಲ್ಲ ಎಂದು ಹೈಕೋರ್ಟ ಆದೇಶಿಸಿದೆ. ಭದ್ರತಾ ಖಾತರಿಗೆ ನೀಡಲಾಗಿದ್ದ ಚೆಕ್ ಬೌನ್ಸ ಆದ ಪ್ರಕರಣದಲ್ಲಿ ಹೈಕೋರ್ಟ ಈ ಆದೇಶ ನೀಡಿದೆ.
ಚೆಕ್ ನೀಡಿದಾತನ ಪತ್ನಿ ವಿರುದ್ದ ಕೇಸು ದಾಖಲಿಸಲು ಅವಕಾಶವಿಲ್ಲವೆಂದು ಹೈಕೋರ್ಟ ಸ್ಪಷ್ಟಪಡಿಸಿದೆ. ಮಹಿಳೆ ವಿರುದ್ಧ ದಾಖಲಾಗಿದ್ದ ಚೆಕ್ ಬೌನ್ಸ ದೂರನ್ನು ರದ್ದುಪಡಿಸಲಾಗಿದೆ.
ಬೆಂಗಳೂರಿನ ವೀಣಾಶ್ರೀ, ಅವರ ಪತಿ ಮತ್ತು ಅತ್ತೆ ಅವರು ಸಾಲವಾಗಿ ಶಂಕರ ಎಂಬುವವರಿಂದ ಹಣ ಪಡೆದುಕೊಂಡಿದ್ದರು. ಸಾಲ ಮರುಪಾವತಿಗೆ ಭದ್ರತಾ ಖಾತರಿಯಾಗಿ ವೀಣಾಶ್ರೀಯ ಪತಿ ಸಹಿ ಇರುವ ಚೆಕ್ ನೀಡಲಾಗಿತ್ತು.
ಆ ಚೆಕ್ ಬೌನ್ಸ ಆದ ಕಾರಣ 2017 ರಲ್ಲಿ ಶಂಕರ 22ನೇ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಎರಡನೇ ಆರೋಪಿ ವೀಣಾಶ್ರೀ ತಮ್ಮ ವಿರುದ್ಧ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಬೌನ್ಸ್ ಆಗಿರುವ ಚೆಕ್ ಗೆ ತಾವು ಸಹಿ ಹಾಕಿಲ್ಲ. ಪತಿ ಸಹಿ ಹಾಕಿದ್ದಾರೆ. ತಮ್ಮನ್ನು ಅಭಿಯೋಜನೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ, ಪ್ರಕರಣದಲ್ಲಿ ಚೆಕ್ ಗೆ ಅರ್ಜಿದಾರರು ಸಹಿ ಹಾಕಿಲ್ಲ. ಚೆಕ್ ಗೆ ಸಂಬಂಧಿಸಿದ ಖಾತೆ ಜಂಟಿ ಖಾತೆಯೂ ಅಲ್ಲ. ಇಂತಹ ಸಂದರ್ಭದಲ್ಲಿ ಪತಿ ನೀಡಿದ ಚೆಕ್ ಬೌನ್ಸ್ ಪ್ರಕರಣದಲ್ಲಿ ಅರ್ಜಿದಾರರಾದ ವೀಣಾಶ್ರೀಯನ್ನು ಆರೋಪಿಯಾಗಿ ಮಾಡಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಪತಿಯ ಚೆಕ್ ಬೌನ್ಸ್ ಆದರೆ ಪತ್ನಿ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ ಎಂದು ತಿಳಿಸಿದೆ. ನ್ಯಾಯಮೂರ್ತಿ ಎಂ.ಐ. ಅರುಣ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.