ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಬಳಕೆಯಾದ ವಾಹನಗಳನ್ನು ಪೊಲೀಸ್ ಠಾಣೆಗಳ ಮುಂದೆ ನಿಲ್ಲಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ, ಮಾಲೀಕರಿಗೆ ವಾಹನ ಹಸ್ತಾಂತರಿಸಬೇಕು ಎಂದು ಸೂಚಿಸಿದೆ.
ಕೊಲೆ ಯತ್ನ ಪ್ರಕರಣವೊಂದರ ಸಂಬಂಧ ಹೋಂಡಾ ಸಿಟಿ ಕಾರು, ಡಿಯೋ ಬೈಕ್ ಮತ್ತು ಆಟೋ ರಿಕ್ಷಾಗಳನ್ನು ರಾಜಾರಾಜೇಶ್ವರಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಮೂರು ಮಂದಿ ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಮಾಡಿ ತಮ್ಮ ವಾಹನಗಳನ್ನು ಪೊಲೀಸ್ ವಶದಿಂದ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಆದರೆ, ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಮನವಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ ಮೆಟ್ಟಿಲೇರಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ, ವಾಹನಗಳನ್ನು ಮಾತ್ರ ಅಪರಾಧ ಪ್ರಕರಣಗಳಲ್ಲಿ ಬಳಕೆ ಮಾಡಲಾಗಿದೆ. ಆದರೆ, ವಾಹನಗಳ ಮಾಲೀಕರು ಅಪರಾಧಿಗಳಲ್ಲ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಾಹನಗಳ ಬಿಡುಗಡೆ ಮಾಡಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿರುವ ವಿಚಾರಣಾ ನ್ಯಾಯಾಲಯದ ಕ್ರಮ ಸರಿಯಿಲ್ಲ ಎಂದು ತಿಳಿಸಿದೆ.
ಅಲ್ಲದೇ ಸುಪ್ರೀಮ ಕೋರ್ಟ ಈ ಹಿಂದೆ ನೀಡಿದ್ದ ಪ್ರಕರಣವನ್ನು ಉಲ್ಲೇಖಿಸಿರುವ ನ್ಯಾಯಪೀಠ, ವಿನಾಕಾರಣ ಪೊಲೀಸ್ ಠಾಣೆಗಳ ಮುಂದೆ ವಾಹನಗಳನ್ನು ನಿಲ್ಲಿಸುವುದಕ್ಕೆ ಅವಕಾಶ ನೀಡಬಾರದು. ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ವಾಹನದ ಮಾಲೀಕರಿಗೆ ಕೆಲವು ಷರತ್ತುಗನ್ನು ವಿಧಿಸಿ ಹಿಂದಿರುಗಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಹಲವು ವರ್ಷಗಳ ಕಾಲ ವಾಹನ ನಿಲ್ಲಿಸಿದಲ್ಲಿ ಅದು ಹಂತ ಹಂತವಾಗಿ ಹಾಳಾಗಲಿದೆ. ಮುಂದಿನ ದಿನಗಳಲ್ಲಿ ಅವುಗಳನ್ನು ಗುರುತಿಸಲು ನ್ಯಾಯಾಲಯಕ್ಕೆ ತರುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಎದುರಾಗಲಿದೆ.
ಸುಪ್ರೀಮ ಕೋರ್ಟ ನೀಡಿರುವ ಮಾರ್ಗಸೂಚಿಗಳಂತೆ ತನಿಖಾಧಿಕಾರಿಗಳು ವಾಹನ ಬಿಡುಗಡೆಗೂ ಮುನ್ನ ಪಂಚರ ಸಮಕ್ಷಮದಲ್ಲಿ ವಿವಿಧ ಕೋನಗಳಲ್ಲಿ ವಾಹನದ ಛಾಯಾಚಿತ್ರ ತೆಗೆದುಕೊಳ್ಳಬೇಕು. ಈ ಛಾಯಾಚಿತ್ರಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.