ಚೆನ್ನೈ: ತಮಿಳುನಾಡಿನ ಎಲ್ಲಾ ದೇವಾಲಯಗಳಲ್ಲಿ ಇನ್ನು ಮುಂದೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ ಶುಕ್ರವಾರ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಆದೇಶಿಸಿದೆ.
ತಮಿಳುನಾಡಿನ ತೂತಿಕೋರಿನ್ ಜಿಲ್ಲೆಯ ತಿರುಚೆಂದೂರಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದೊಳಗೆ ಮೊಬೈಲ್ ಫೋನ್ ನಿಷೇಧಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಎಂ. ಸೀತಾರಾಮನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ ಈ ಆದೇಶ ನೀಡಿದೆ.
ಭಕ್ತರು ದೇವರ ದರ್ಶನ ಮಾಡುವುದನ್ನು ಬಿಟ್ಟು ತಮ್ಮ ಮೊಬೈಲ್ನಲ್ಲಿ ದೇವರ ವಿಗ್ರಹಗಳು ಮತ್ತು ಪೂಜೆಗಳ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅರ್ಜಿದಾರರು ಬೇಸರ ವ್ಯಕ್ತಪಡಿಸಿದ್ದರು. ಇದು ಆಗಮಗಳಿಗೆ ವಿರುದ್ಧವಾಗಿರುವುದರಿಂದ ತಿರುಚೆಂದೂರು ದೇವಸ್ಥಾನದೊಳಗೆ ಮೊಬೈಲ್ ಬಳಕೆಯನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್. ಮಹದೇವನ್ ಮತ್ತು ಜೆ. ಸತ್ಯನಾರಾಯಣ ಪ್ರಸಾದ ಅವರುಗಳು, ಭಕ್ತರ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸುವುದರ ಜೊತೆಗೆ ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡಲು ಅಧಿಕಾರಿಗಳು ದೇವಾಲಯದ ಆವರಣದಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು. ಫೋನ್ ಮತ್ತು ಕ್ಯಾಮೆರಾಗಳ ಬಳಕೆಯು ಭಕ್ತರ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ ಎಂದಿದ್ದಾರೆ.
ಮೊಬೈಲ್ ಫೋನ್ಗಳ ಮೇಲಿನ ನಿಷೇಧವನ್ನು ದೇಶಾದ್ಯಂತ ಹಲವು ದೇವಾಲಯಗಳಲ್ಲಿ ಈಗಾಗಲೇ ನಿಷೇಧಿಸಲಾಗಿದೆ. ಗುರುವಾಯೂರ್ನಲ್ಲಿರುವ ಶ್ರೀ ಕೃಷ್ಣ ದೇವಾಲಯ, ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯ ಇದರಲ್ಲಿ ಸೇರಿವೆ. ಈ ನಿಯಮವನ್ನು ಆ ದೇವಾಲಯಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.