ಬೆಂಗಳೂರು, ೨೬- ಲಂಚ ಪಡೆದ ಪ್ರಕರಣದಲ್ಲಿ ದ್ವಿತೀಯ ದರ್ಜೆ ಗುಮಾಸ್ತನನ್ನು ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಿದ್ದ ನಗರಾಭಿವೃದ್ಧಿ ಇಲಾಖೆಯ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದನ್ನು ರದ್ದುಪಡಿಸಲು ಕೋರಿದ್ದ ಗುಮಾಸ್ತನ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಪ್ರಕರಣದ ವಿವರ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಸವರಾಜ ಸಂಗಪ್ಪ ಗಾಣಿಗೇರಾ ಎಂಬವರು ತಮ್ಮ ನಿವೇಶನದಲ್ಲಿ ಶೆಡ್ ನಿರ್ಮಿಸುವ ಸಲುವಾಗಿ ಅನುಮತಿ ಕೋರಿದ್ದು, ಈ ವೇಳೆ ಕುಷ್ಟಗಿ ಪುರಸಭೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ನರಸಿಂಹಲು ಅವರಿಂದ 400 ರೂಪಾಯಿ ಲಂಚ ಪಡೆದಿದ್ದರು.
2008ರ ಅಕ್ಟೋಬರ್ 3ರಂದು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ವಿಚಾರಣೆಯಲ್ಲೂ ಇದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಇದನ್ನು ಪ್ರಶ್ನಿಸಿ ನರಸಿಂಹಲು ಹೈಕೋರ್ಟ ಮೆಟ್ಟಿಲೇರಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದ್ದು ನಗರಾಭಿವೃದ್ಧಿ ಇಲಾಖೆಯ ಕ್ರಮವನ್ನು ಎತ್ತಿ ಹಿಡಿದಿದೆ.