ಬೆಳಗಾವಿ : 21 ದಿನಗಳ ಹಿಂದೆ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಕಾಣಿಸಿಕೊಂಡ ಚಿರತೆ ಹುಡುಕಾಟ ಮುಂದುವರಿದಿದೆ. 21 ದಿನಗಳಲ್ಲಿ ಕೇವಲ ಮೂರೇ ಬಾರೀ ಜನರಿಗೆ ಕಾಣಿಸಿಕೊಂಡು ಕಣ್ಮರೆಯಾಗಿರುವ ಅದು ಒಂದು ಸಲ ಸ್ವಲ್ಪದರಲ್ಲಿ ಪಾರಾಗಿ ಓಡಿ ಹೋಯಿತು. ಬೆಳಗಾವಿಯ ಚಿರತೆ ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು ಅರಣ್ಯ ಇಲಾಖೆಯ ಮರ್ಯಾದೆ ಹರಾಜಿಗಿಡುತ್ತಿದೆ.
ಈಗ ಅರಣ್ಯ ಇಲಾಖೆ ಅದನ್ನು ಹನಿ ಟ್ರ್ಯಾಕ್ ತತ್ವದ ಮೂಲಕ ಹಿಡಿಯುವ ಯೋಜನೆ ಹಾಕಿಕೊಂಡಿದ್ದು ಭೂತರಾಮನಹಟ್ಟಿಯ ಅಭಯಾರಣ್ಯದಲ್ಲಿರುವ ಹೆಣ್ಣು ಚಿರತೆಯ ಮೂತ್ರ ಬಿದ್ದ ಸ್ಥಳದ ಮಣ್ಣನ್ನು ತಂದು ಚಿರತೆ ಇದೆ ಎನ್ನಲಾದ ಗಾಲ್ಫ ಮೈದಾನದಲ್ಲಿ ಅಲ್ಲಲ್ಲಿ ಚಿರತೆಯನ್ನು ಹಿಡಿಯುವ ಯೋಜನೆ ರೂಪಿಸಿದೆ.
ಆದರೆ ಗಾಲ್ಫ ಕೋರ್ಸನಲ್ಲಿರುವ ಚಿರತೆ ಗಂಡೋ ಹೆಣ್ಣೋ ಗೊತ್ತಿಲ್ಲ. ಲಭ್ಯವಾಗಿರುವ ವಿಡಿಯೋ, ಸ್ಥಿರ ಫೋಟೋ ಜೂಮ್ ಮಾಡಿ ನೋಡಿದರೂ ಅದರ ಲಿಂಗ ಪತ್ತೆಯಾಗುತ್ತಿಲ್ಲ. ಇರಲಿ ಹೆಣ್ಣು ಚಿರತೆಯ ಮೂತ್ರದ ಮಣ್ಣು ಹರಡಿ ನೋಡೋಣ ಎಂಬ ನಿರ್ಧಾರಕ್ಕೆ ಕಾರ್ಯಾಚರಣೆ ತಂಡ ಬಂದಿದೆ.