ಬೆಳಗಾವಿ, ೨೯- ಕರ್ನಾಟಕದ ಸಕಲ ಸೌಲಭ್ಯ ಪಡೆದು ರಾಜ್ಯದ ಹಿತಕ್ಕೆ ವಿರುದ್ಧವಾಗಿರುವ ಎಂಇಎಸ್ ನವರನ್ನು ರಾಜ್ಯದಿಂದ ಹೊರಹಾಕಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು.
ಮಹಾರಾಷ್ಟ್ರದ ಜತ್ತ ತಾಲೂಕಿನಿಂದ ಬಂದ ಕನ್ನಡಿಗ ಮುಖಂಡರೊಂದಿಗೆ ಬೆಳಗಾವಿಯಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಮಹಾರಾಷ್ಟ್ರದ ಗಡಿ ಕನ್ನಡಿಗರಿಗೆ ಅನ್ಯಾಯ ಆಗ್ತಿದೆ., ಬಸವರಾಜ ಬೊಮ್ಮಾಯಿ ಅವರನ್ನು ಮಹಾರಾಷ್ಟ್ರದ ಜತ್ ತಾಲೂಕಿಗೆ ಆಹ್ವಾನ ಮಾಡ್ತಿವಿ. ಜತ್ತನಲ್ಲಿ ಬೊಮ್ಮಾಯಿ ಅವರಿಗೆ ‘ ದಕ್ಷಿಣ ಪಥೇಶ್ವರ’ ಅಂತಾ ಬಿರುದು ನೀಡಿ ಗೌರವಿಸುತ್ತೇವೆ. ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಈ ಪ್ರಶಸ್ತಿ ಕೊಡ್ತಿವಿ. ಈಗಾಗಲೇ ಮುಖ್ಯಮಂತ್ರಿ ಕಚೇರಿ ಜೊತೆಗೆ ಪತ್ರ ಸಂಪರ್ಕ ಮಾಡಿದ್ದೇವೆ ಎಂದು ಅವರು ಹೇಳಿದರು.
ನಾಳೆ ಸುಪ್ರೀಮ ಕೋರ್ಟನಲ್ಲಿ ಗಡಿ ವಿವಾದ ಅರ್ಜಿ ವಿಚಾರಣೆಗೆ ಬರಲಿದೆ. ಗಡಿ ವಿವಾದ ಸುಪ್ರೀಮ ಕೋರ್ಟನಲ್ಲಿ ಏನಾಗುತ್ತದೆ ಎಂಬ ಆತಂಕ ನಮ್ಮಲ್ಲಿ ಇದೆ. ಗಡಿ ಭಾಗದ ಅಭಿವೃದ್ಧಿ ಮತ್ತು ಗಡಿ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಸರ್ಕಾರದ ವಿವಿಧ ಇಲಾಖೆಯಿಂದ ಆಗಿಲ್ಲ. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ನಾಳೆ ಏನಾದರೂ ಸುಪ್ರೀಮ ಕೋರ್ಟನಲ್ಲಿ ವ್ಯತಿರಿಕ್ತವಾದ ತೀರ್ಮಾನ ಬಂದರೆ ಆಗೋ ಅನಾಹುತಕ್ಕೆ ಸರ್ಕಾರ ಹೊಣೆಯಾಗಲಿದೆ ಎಂದರು.
ಎಂಇಎಸ್ ನವರನ್ನು ಒದ್ದು ಬೆಳಗಾವಿಯಿಂದ ಹೊರಗೆ ಹಾಕಬೇಕು. ಹೆತ್ತ ತಾಯಿಗೆ ದ್ರೋಹ ಮಾಡುವ ಕೆಲಸವನ್ನು ನಮ್ಮ ಜನಪ್ರತಿಧಿನಿಗಳು ಮಾಡಬಾರದು. ಬೆಳಗಾವಿಯಲ್ಲಿ ಇರುವ ಎಂಇಎಸ್ ರೋಹಿಂಗ್ಯಾಗಳಿಗೆ ಹೋಲಿಸಿ ಅವರನ್ನೆಲ್ಲ ಹೊರಹಾಕಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರದ ಇಬ್ಬರು ಗಡಿ ಸಚಿವರು ಬೆಳಗಾವಿ ಬರುವುದಾಗಿ ಹೇಳಿದ್ದಾರೆ. ಡಿಸೆಂಬರ 3ರಂದು ಬೆಳಗಾವಿಗೆ ಬರ್ತಿವಿ ಅಂತಾ ಮಹಾ ಸಚಿವರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ಕೊಡಬೇಡಿ ಎಂದು ಕೇಳಿಕೊಂಡ ಅವರು, ಒಂದು ವೇಳೆ ಸರ್ಕಾರ ಅನುಮತಿ ಕೊಟ್ಟರೆ ಸಭೆಗೆ ನುಗ್ಗುತ್ತೇವೆ ಎಂದರು.
ಎಂಇಎಸ್ ಅಧಿವೇಶನ ಸಂದರ್ಭದಲ್ಲಿ ಮಹಾಮೇಳಾವ ಮಾಡಲು ಮುಂದಾಗಿದ್ದಾರೆ. ಎಂಇಎಸ್ ಮಹಾಮೇಳಾವಗೆ ಅವಕಾಶ ನೀಡಬಾರದು. ನಾವು ಕೂಡಾ ‘ಒನಕೆ ಚಳುವಳಿ’ ಮಾಡುತ್ತೇವೆ. ಜತ್ತ ಕನ್ನಡಿಗರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿಸುತ್ತೇವೆ. ಈ ವಾರದಲ್ಲಿ ಅವರನ್ನು ಭೇಟಿ ಮಾಡಿಸುತ್ತೇವೆ ಎಂದು ಭೀಮಾಶಂಕರ ಪಾಟೀಲ ಹೇಳಿದರು.
ಒಟ್ಟಾರೆ ಜತ್ತ ಕನ್ನಡಿಗರು ಕರ್ನಾಟಕಕ್ಕೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಬಗ್ಗೆ ಕರ್ನಾಟಕ ಸರ್ಕಾರ ಸುಪ್ರೀಮ ಕೋರ್ಟನಲ್ಲಿ ಅದ್ಯಾವ ರೀತಿ ಹೋರಾಟ ಮಾಡುತ್ತದೆ ಎಂದು ಕಾದು ನೋಡಬೇಕಿದೆ.