ಚಿತ್ರದುರ್ಗ: ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ ಹಾಗೂ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ನಡುವಿನ ಕಾದಾಟ ಈಗ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಹಂತ ತಲುಪಿದೆ. ಟಿಕೆಟ್ ವಿಚಾರವಾಗಿ ಬಿಜೆಪಿ ನಾಯಕರಿಗೆ ಹೊಸ ತಲೆನೋವು ಆರಂಭವಾಗಿದೆ.
ಇಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು, ರಾಜಿ ಸಂಧಾನಕ್ಕಾಗಿ ಹೊಸದುರ್ಗದಲ್ಲಿ ನಡೆದಿದ್ದ ಸಭೆ ವಿಫಲವಾಗಿದೆ. ಪಕ್ಷದಿಂದ ನನಗೆ ಟಿಕೆಟ್ ಕೊಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಗೂಳಿಹಟ್ಟಿ ಶೇಖರ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ಹೊಸದುರ್ಗದಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಿ ಗೂಳಿಹಟ್ಟಿ ಶೇಖರ ವಿರುದ್ಧ ಲಿಂಗಮೂರ್ತಿ ಭ್ರಷ್ಟಾಚಾರ ಆರೋಪ ಮಾಡಿದ್ದರು. ಲಿಂಗಮೂರ್ತಿ ಕಡು ಭ್ರಷ್ಟ ಎಂದು ರಾಜ್ಯಕ್ಕೆ ಗೊತ್ತಿದೆ. ನನಗೆ ಬಿಜೆಪಿ ಟಿಕೆಟ್ ತಪ್ಪಿಸಲು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಗೂಳಿಹಟ್ಟಿ ಕಿಡಿಕಾರಿದ್ದರು. ಇಬ್ಬರ ನಡುವಿನ ಬಡಿದಾಟ ಈಗ ಬಿಜೆಪಿಗೆ ಗೊಂದಲ ನಿರ್ಮಿಸಿದ್ದು ಯಾರಿಗೆ ಟಿಕೆಟ್ ಕೊಡಲಿದೆ ಎಂಬುದೇ ಕುತೂಹಲ ಮೂಡಿಸಿದೆ.