ಅಕ್ರಮ ಸಂಬಂಧವಿದ್ದರೆ ವಿಚ್ಛೇದನ ಕೊಟ್ಟು ಹೋಗಿ, ಸಂಗಾತಿಯನ್ನು ಕೊಲ್ಲಬೇಡಿ

A B Dharwadkar
ಅಕ್ರಮ ಸಂಬಂಧವಿದ್ದರೆ ವಿಚ್ಛೇದನ ಕೊಟ್ಟು ಹೋಗಿ, ಸಂಗಾತಿಯನ್ನು ಕೊಲ್ಲಬೇಡಿ

ಬೆಳಗಾವಿ : “ಮಹಿಳೆಯರೇ ನಿಮಗೆ ಪರಪುರುಷರೊಂದಿಗೆ ಅಕ್ರಮ ಸಂಬಂಧವಿದ್ದರೆ ಪತಿಗೆ ವಿವಾಹ ವಿಚ್ಛೇದನ ನೀಡಿ ಅವರಿಂದ ದೂರವಾಗಿ, ಆದರೆ ದಯವಿಟ್ಟು ಪತಿಯನ್ನು ಕೊಲೆ ಮಾಡಬೇಡಿ. ಮಕ್ಕಳನ್ನು, ಹೆತ್ತವರನ್ನು ಅನಾಥರನ್ನಾಗಿ ಮಾಡಬೇಡಿ” ಎಂದು ಕರ್ನಾಟಕ ರಕ್ಷಣಾ ವೇದಿಕೆ ವಿನಂತಿಸಿಕೊಂಡಿದೆ.

ಇತ್ತೀಚಿಗೆ ಪರ ಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿದ ಮಹಿಳೆಯರು ತಮ್ಮ ಪತಿಗಳನ್ನು ಹತ್ಯೆ ಮಾಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವದರಿಂದ ನಗರದ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಮಾಡುವ ಪತ್ನಿಯರಿಗೆ ಮತ್ತು ಇದೇ ಕಾರಣಕ್ಕಾಗಿ ಪತ್ನಿಯನ್ನು ಕೊಲೆ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ನ್ಯಾಯಾಲಯಕ್ಕೆ ಶಿಫಾರಸ್ಸು ಮಾಡಬೇಕೆಂದು ಸರಕಾರಕ್ಕೆ ವಿನಂತಿಸಿಕೊಂಡ ಕುರಿತ ಮನವಿ ಪತ್ರ ಅರ್ಪಿಸಲಾಯಿತು.

ಬೆಳಗಾವಿಯ ಅಂಬೇಡ್ಕರ ನಗರದ ಸಂಧ್ಯಾ ಎಂಬಾಕೆ ತನ್ನ ಪ್ರಿಯಕರ ಬಾಳು ಬಿರಂಜೆ ಮತ್ತು ನಾಲ್ವರು ಸಂಬಂಧಿಕರ ನೆರವಿನಿಂದ ಪತಿ ರಮೇಶ ಕಾಂಬಳೆ ಅವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದೂ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ರಮೇಶ ಕಾಂಬಳೆಯನ್ನು ಮಾರ್ಚ 23ರಂದು ಕೊಲೆ ಮಾಡಿದ ಮಹಿಳೆಯು ಪತಿಯ ಶವವನ್ನು ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ನಲ್ಲಿ ಎಸೆದಿದ್ದಳು. ಎಸೆದ ಶವ ಆಳವಾದ ಕಂದಕಕ್ಕೆ ಬೀಳದೇ ಮರವೊಂದರಲ್ಲಿ ಸಿಕ್ಕಿಕೊಂಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತು.

ಪತಿಯ ಶವ ಎಸೆದ ನಂತರ ತನ್ನ ಪತಿ ರಮೇಶ ಕಾಣೆಯಾಗಿದ್ದಾರೆ ಎಂದು ಸಂಧ್ಯಾ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ವಿಚಾರಣೆಯಲ್ಲಿ ಸಂಧ್ಯಾ ಹೇಳಿಕೆಗಳು ವಿಭಿನ್ನವಾಗಿರುತ್ತಿದ್ದರಿಂದ ಸಂಶಯಗೊಂಡ ಪೊಲೀಸರು ಅವಳ ಹೆಚ್ಚಿನ ವಿಚಾರಣೆ ನಡೆಸಿದಾಗ, ಅವಳು ತಾನೇ ಪತಿಯನ್ನು ಕೊಂದ ವಿಷಯ ಒಪ್ಪಿಕೊಂಡಳು.

ಮಂಗಳವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಮತ್ತು ಕೊಲೆಯಾದ ರಮೇಶ ಕಾಂಬ್ಳೆ ಸಂಬಂಧಿಕರು ಕೊಲೆಗಡುಕ ಸಂಧ್ಯಾಳನ್ನು “ಚೋರ್ಲಾ ಘಾಟ್‌ ಚಮೇಲಿ” ಎಂದು ಸಂಭೋಧಿಸಿ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಪತಿಯ ಮೇಲೆ ಪತ್ನಿಗೆ ಮನಸ್ಸಿಲ್ಲದಿದ್ದರೆ ಪತಿ ಅವಳ ಮೈ ಮುಟ್ಟಬಾರದು ಅಂತಾ ಕಾನೂನಲ್ಲೇ ಅವಕಾಶ ಇದೆ. ನಿಮಗೆ ಗಂಡ ಬೇಡವಾದರೆ ಗಂಡನಿಗೆ ವಿಚ್ಛೇದನ ಕೊಟ್ಟು ಹೋಗಿ. ಆದರೆ ಕೊಲೆ ಮಾಡಿ ಮಕ್ಕಳನ್ನು, ತಂದೆ ತಾಯಿಗಳನ್ನು ಅನಾಥ ಮಾಡುವುದು, ನಂತರ ಜೈಲಿಗೆ ಹೋಗೋದು ಯಾರಿಗೆ ಬೇಕು ಈ ಜೀವನ ?’ ಕಾನೂನಿನಲ್ಲಿ ನಿಮಗೆ ಅವಕಾಶ ಇದೆ ಗಂಡನಿಗೆ ಡೈವರ್ಸ್ ಕೊಟ್ಟು ಹೋಗಿ ಆದರೆ ಕೊಲೆ ಮಾಡಬೇಡಿ” ಎಂದ ಕರವೇ ಮುಖಂಡ ಮಹಾದೇವ ತಳವಾರ ಹೇಳಿದರು.

ಕೊಲೆ ಮಾಡಿದ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಒತ್ತಾಯಿಸಿದ ಪ್ರತಿಭಟನಾಕಾರರು, ರಮೇಶ ಕಾಂಬಳೆ ತಂದೆ ತಾಯಿಗೆ ವಯಸ್ಸಾಗಿದ್ದು ಇಬ್ಬರು ಪುತ್ರಿಯರಿದ್ದಾರೆ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ ಕೊಲೆಯಾದ ರಮೇಶ‌ ಅವರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿ ಕೊಡಬೇಕೆಂದು ಮನವಿ ಮಾಡಿದರು‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.