ಬೆಳಗಾವಿ, ೧೫: ಉಡುಪಿಯಲ್ಲಿ ಓರ್ವ ಬಾಲಕ ಮತ್ತು ಮೂವರು ಮಹಿಳೆಯರನ್ನು ಬರ್ಬರ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮತ್ತು ಉಡುಪಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸಿಆರ್ಪಿಎಫ್ ಯೋಧನನ್ನು ಬಂಧಿಸಿದ್ದಾರೆ. ಶಂಕಿತ ಆರೋಪಿ 28 ವರ್ಷದ ಪ್ರವೀಣ ಅರುಣ ಚೌಗಲೆ ಎನ್ನಲಾಗಿದ್ದು ನವೆಂಬರ್ 14 ರಂದು ಬೆಳಗಾವಿ ಜಿಲ್ಲೆಯ ಕುಡಚಿ ಪಟ್ಟಣದ ಸಂಬಂಧಿಕರ ಮನೆಯಿಂದ ವಶಕ್ಕೆ ಪಡೆದಿದ್ದರು. “ಉಡುಪಿಯಿಂದ ಬಂದ ಅಧಿಕಾರಿಗಳ ತಂಡ ಬೆಳಗಾವಿಯಲ್ಲಿ ಮೊಕ್ಕಾಂ ಹೂಡಿತ್ತು. ಅವರು ನಮ್ಮ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಿದರು. ಮೊಬೈಲ್ ತಂತ್ರಜ್ಞಾನದ ಉಪಕರಣಗಳನ್ನು ಬಳಸಿ ಶಂಕಿತನನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಂಕಿತ ಆರೋಪಿ ಪ್ರವೀಣ ಅರುಣ ಚೌಗಲೆಯನ್ನು ಮಂಗಳವಾರ ವಶಕ್ಕೆ ಪಡೆದಿದ್ದು, ಘಟನೆಗೆ ಕಾರಣ ಬುಧವಾರ ಸಂಜೆಯವರೆಗೆ ತಿಳಿದು ಬರಲಿದೆ ಎಂದು ಉಡುಪಿ ಪೊಲೀಸ ವರಿಷ್ಠ ಡಾ. ಅರುಣ ಹೇಳಿಕೆ ನೀಡಿದ್ದಾರೆ. ಉಡುಪಿಯಲ್ಲಿ ಪತ್ರಕರ್ತರಿಗೆ ಅವರು ಈ ವಿಷಯ ತಿಳಿಸಿದ್ದು ನಾಲ್ವರ ಹತ್ಯೆಗೆ ಸಂಬಂಧಿಸಿ ಪ್ರವೀಣ ಅರುಣ ಚೌಗಲೆಯನ್ನು ಬೆಳಗಾವಿ ಪೋಲೀಸರ ನೆರವಿನಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ. ಬಂಧಿತನನ್ನು ಟೆಕ್ನಿಕಲ್ ಮತ್ತು ಹ್ಯೂಮನ್ ಇಂಟೆಲಿಜೆನ್ಸ ತಂತ್ರದಿಂದ ವಿಚಾರಣೆ ನಡೆಸುತ್ತಿದ್ದೇವೆ. ಸಂಜೆಯೊಳಗೆ ತನಿಖೆ ಮಾಡಿ ಪೂರ್ಣ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಶಂಕಿತನನ್ನು ಬೆಳಗಾವಿಯಲ್ಲಿ ಪತ್ತೆ ಹಚ್ಚಲಾಯಿತು ಮತ್ತು ಕಾನೂನು ಜಾರಿ ಅಧಿಕಾರಿಗಳು ತಕ್ಷಣವೇ ಆತನನ್ನು ವಶಕ್ಕೆ ತೆಗೆದುಕೊಂಡರು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಬಂಧಿತ ಪ್ರವೀಣ ಚೌಗಲೆ (35) ಕೇವಲ 10 ನಿಮಿಷಗಳಲ್ಲಿ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಂದಿದ್ದಾನೆ. ಆರೋಪಿಯು ಕಳೆದ ಎರಡು ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದು, ಬೆಳಗಾವಿ ಮೂಲಕ ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಯೋಜಿಸುತ್ತಿದ್ದ ಎನ್ನಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದ ಈತನನ್ನು ಉಡುಪಿ ಡಿಎಸ್ ಪಿ ನೇತೃತ್ವದ ತಂಡ ಪತ್ತೆ ಹಚ್ಚಿ ಬಂಧಿಸಿದೆ. ಮೊಬೈಲ್ ಟವರ್ ಲೊಕೇಶನ್ ಟ್ರ್ಯಾಕಿಂಗ್ ಮೂಲಕ ಬಂಧನವನ್ನು ಸುಲಭಗೊಳಿಸಲಾಗಿದೆ ಎಂದು ಪೊಲೀಸ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ನಾನ್ ಮತ್ತು ಆಕೆಯ ಸಹೋದರಿ ಐನಾಝ್ ಉಡುಪಿಯಲ್ಲಿರುವ ತಮ್ಮ ತಾಯಿ ಮತ್ತು ಸಂಬಂಧಿಕರೊಂದಿಗೆ ರಜೆ ಕಳೆಯಲು ಮಂಗಳೂರಿನಿಂದ ಮನೆಗೆ ಮರಳಿದ್ದರು.”ಹಿಂದಿನ ರಾತ್ರಿ ಮಾತ್ರ ಹುಡುಗಿಯರು ಮನೆಗೆ ಬಂದಿದ್ದರಿಂದ ಮತ್ತು ಕೊಲೆಗಾರ ಬೆಳಿಗ್ಗೆ ಬಂದಿದ್ದರಿಂದ ಆತನ ಪ್ರಾಥಮಿಕ ಗುರಿ ಯಾರೆಂದು ನಾವು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ” ಎಂದು ಪೊಲೀಸ್ ಮೂಲವು ಬಂಧನಕ್ಕೆ ಮುಂಚಿತವಾಗಿ ತಿಳಿಸಿದೆ.
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೃಪ್ತಿ ಲೇಔಟ್ನಲ್ಲಿ ರವಿವಾರ ಬೆಳಿಗ್ಗೆ 8:30ರ ಸುಮಾರಿಗೆ ಈ ದಾರುಣ ಘಟನೆ ನಡೆದಿದೆ. ದಾಳಿಕೋರನು ಅವರ ನಿವಾಸಕ್ಕೆ ನುಗ್ಗಿ ಹಸೀನಾ (46) ಮತ್ತು ಆಕೆಯ ಮಕ್ಕಳಾದ ಅಫ್ನಾನ್ 23, ಅಗ್ನಾಜ್ 21, ಮತ್ತು ಬಾಲಕ ಅಸೀಮ 12 ರ ಮೇಲೆ ಹಲ್ಲೆ ಕೊಚ್ಚಿ ಕೊಲೆ ಮಾಡಿದ್ದ. ಹಲ್ಲೆಯಿಂದ ಮನೆಯ ಸ್ನಾನಗೃಹದಲ್ಲಿ ಹೋಗಿ ಬಾಗಿಲು ಹಾಕಿಕೊಂಡಿದ್ದ ಹಸೀನಾ ಅವರ ಅತ್ತೆ ಹಾಜಿರಾ (70) ಅವರು ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.