ಬೆಳಗಾವಿ : ಮಹಾರಾಷ್ಟ್ರದ ಗಡಿಯ ಕನ್ನಡ ಪ್ರದೇಶಗಳು ಅನಾಥಪ್ರಜ್ಞೆ ಅನುಭವಿಸುತ್ತಿವೆ, ಮಹಾರಾಷ್ಟ್ರ ಸರ್ಕಾರ ಈ ಪ್ರದೇಶಗಳನ್ನು ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸಿದೆ. ರಸ್ತೆ, ನೀರು, ವಿದ್ಯುತ್ ಮುಂತಾದ ಮೂಲಭೂತ ಸೌಲಭ್ಯಗಳಲ್ಲದೇ ಕನ್ನಡ ಶಾಲೆಗಳಿಗೆ ಶಿಕ್ಷಕರ ತೀವ್ರ ಕೊರತೆಯಿದೆ, ಮಕ್ಕಳಿಗೆ ಪಠ್ಯ ಪುಸ್ತಕಗಳೂ ಸರಿಯಾದ ಸಮಯಕ್ಕೆ ಲಭ್ಯವಾಗುವುದಿಲ್ಲ, ಹಾಗಾಗಿ ಕರ್ನಾಟಕ ಆಸಕ್ತಿ ವಹಿಸಿ ತಮ್ಮನ್ನು ಕರ್ನಾಟಕದಲ್ಲಿ ಸೇರಿಸಿಕೊಳ್ಳಬೇಕು ಎಂದು ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಕನ್ನಡ ಪ್ರಮುಖರು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಬೆಳಗಾವಿಯಲ್ಲಿ ಕರ್ನಾಟಕ ನವನಿರ್ಮಾಣ ಸೇನೆಯ ಆಶ್ರಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜತ್ತ ತಾಲ್ಲೂಕು ಕನ್ನಡ ಹೋರಾಟ ಸಮಿತಿಯ ಸೋಮಲಿಂಗ ಚೌಧರಿ ಮತ್ತು ಗೌಡೇಶ ಮಾಡಳ್ಳಿ ಅವರುಗಳು, ಕರ್ನಾಟಕದ ಇತಿಹಾಸದಲ್ಲೇ ಮುಖ್ಯಮಂತ್ರಿಯಾದವರು ನಮ್ಮ ಪರವಾಗಿ ಮಾತನಾಡಿದ್ದಾರೆ. ಅದಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಫೆಬ್ರವರಿ ತಿಂಗಳಿನಲ್ಲಿ ಜತ್ತನಲ್ಲಿ ಸತ್ಕರಿಸಲಾಗುವದು ಎಂದು ತಿಳಿಸಿದರು.
ಜತ್ತನಿಂದ ವಿಜಯಪುರಗೆ 27 ಕಿಮಿ ಅಂತರ ಇದೆ. ನಾವು ಮಹಾರಾಷ್ಟ್ರ ಗಡಿಯಿಂದ ಕರ್ನಾಟಕ ವಿಜಯಪುರ ಜಿಲ್ಲೆ ಗಡಿಗೆ ಬಂದು ನೀರು ತೆಗೆದುಕೊಂಡು ಹೋಗುತ್ತೇವೆ ಎಂದರು.
ಮೈಸಾಳ ನೀರಾವರಿ ಯೋಜನೆ ಜಾರಿಗೆ ತಂದಿಲ್ಲ. ಗಡಿ ಭಾಗದ ಕನ್ನಡ ಪ್ರದೇಶದಲ್ಲಿ ರಸ್ತೆಗಳು ಹಾಳಾಗಿವೆ. 215 ಕನ್ನಡ ಶಾಲೆಗಳಿವೆ, 200 ಮಕ್ಕಳಿಗೆ ಒಬ್ಬ ಕನ್ನಡ ಶಿಕ್ಷಕರಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿ ನಮಗೆ ಸೌಲಭ್ಯ ಸಿಗುತ್ತಿಲ್ಲ. ನಾವು ಮಹಾರಾಷ್ಟ್ರದಲ್ಲಿ ಇರೊಲ್ಲ ಕರ್ನಾಟಕಕ್ಕೆ ಸೇರ್ಪಡೆ ಆಗ್ತಿವಿ. ನಮ್ಮನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ಅವರು ಮನವಿ ಮಾಡಿಕೊಂಡರು.