ಬೆಂಗಳೂರು, ೧೮- ಗ್ರಾಮ ಪಂಚಾಯತಗಳಿಗೆ ಸಿಹಿಸುದ್ದಿ ಬಂದಿದೆ. ಗೌರವಧನವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಜಂಟಿ ಕಾರ್ಯದರ್ಶಿ ಎಂ. ಎನ್. ಬಾನೊಳ್ಳಿ ಈ ಕುರಿತು ಆದೇಶ ಹೊರಡಿಸಿದ್ದಾರೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳಿಗೆ ರೂ. 3000, ಉಪಾಧ್ಯಕ್ಷರುಗಳಿಗೆ ರೂ. 2000 ಹಾಗೂ ಸದಸ್ಯರುಗಳಿಗೆ ರೂ. 1000ಗಳ ಮಾಸಿಕ ಗೌರವಧನವನ್ನು ನಿಗದಿಪಡಿಸಲಾಗಿತ್ತು.
ಪ್ರಸ್ತುತ ಗೌರವಧನವನ್ನು ಪರಿಷ್ಕರಿಸಿ, ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳಿಗೆ ರೂ. 6,000, ಉಪಾಧ್ಯಕ್ಷರುಗಳಿಗೆ ರೂ. 4,000 ಹಾಗೂ ಸದಸ್ಯರುಗಳಿಗೆ ರೂ. 2,000ಗಳ ಮಾಸಿಕ ಗೌರವಧನವನ್ನು ನಿಗದಿಗೊಳಿಸಲು ತೀರ್ಮಾನಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಪ್ರಕಾರ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳಿಗೆ ಮಾಸಿಕ ರೂ. 6,000, ಉಪಾಧ್ಯಕ್ಷರುಗಳಿಗೆ ಮಾಸಿಕ ರೂ. 4,000 ಹಾಗೂ ಸದಸ್ಯರುಗಳಿಗೆ ಮಾಸಿಕ ರೂ. 2,000ಗಳ ಗೌರವಧನವನ್ನು ಪರಿಷ್ಕರಿಸಿ ನಿಗದಿಗೊಳಿಸಿ ಆದೇಶಿಸಿದೆ.
ಕಳೆದ ಬಾರಿಯ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್‌ನ ಸದಸ್ಯ ಸುನೀಲ ಗೌಡ ಪಾಟೀಲ ವಿಧಾನ ಪರಿಷತ್‌ನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಗೌರವ ಧನ ಹೆಚ್ಚಳ ಮಾಡುವ ಕುರಿತು ವಿಷಯ ಪ್ರಸ್ತಾಪಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಿಗೆ ಕನಿಷ್ಠ ಕೂಲಿಗಿಂತ ಕಡಿಮೆ ಗೌರವಧನವಿದೆ. ಆದ್ದರಿಂದ ಅದನ್ನು ಏರಿಕೆ ಮಾಡಬೇಕು. ಅವರಿಗೆ ಉಚಿತ ಬಸ್ ಪಾಸ ನೀಡಬೇಕು ಎಂದು ಆಗ್ರಹಿಸಿದ್ದರು.
ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರ ಗೌರವಧನ ಹೆಚ್ಚಳ ಮಾಡುವ ಸಂಬಂಧ ಶೀಘ್ರವೇ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಆಗ ಸದನಕ್ಕೆ ಭರವಸೆ ನೀಡಿದ್ದಾರೆ.