ಬೆಳಗಾವಿ, ಮೇ 2: ಕರ್ನಾಟಕ ವಿಧಾನಸಭೆ ಚುನಾವಣೆ ಅಂಗವಾಗಿ ಭಾರತ ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ದಿವ್ಯಾಂಗರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೆ ಮತದಾನ ಮಾಡುವುದಕ್ಕೆ ಅವಕಾಶ ನೀಡಿದ್ದು ಈ ಅವಕಾಶವನ್ನು ಬಳಸಿಕೊಂಡು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ 103 ವರ್ಷ 4 ತಿಂಗಳ ವಯೋವೃದ್ಧ ಮಹದೇವ ಮಹಾಲಿಂಗ ಮಾಳಿ ಅವರು ಸೋಮವಾರ(ಮೇ 1) ತಮ್ಮ ಮನೆಯಿಂದಲೇ ಮತವನ್ನು ಚಲಾಯಿಸಿದರು.
ಶತಾಯುಷಿ ಮಹದೇವ ಅವರು ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿರುವುದನ್ನು ಗಮನಿಸಿದ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾದ ರಾಜೀವ ಕುಮಾರ ಅವರು, ಮಂಗಳವಾರ ಮಧ್ಯಾಹ್ನ ಮಹದೇವ ಮಾಳಿ ಅವರಿಗೆ ಸ್ವತಃ ದೂರವಾಣಿ ಕರೆ ಮಾಡಿ ಅಭಿನಂದನೆಗಳನ್ನು ತಿಳಿಸಿದರು.
ಪ್ರಜಾಪ್ರಭುತ್ವದ ಹಬ್ಬವಾಗಿರುವ ಮತದಾನ ಪ್ರಕ್ರಿಯೆಯಲ್ಲಿ ಯುವ ಮತದಾರರು ಹಾಗೂ ನಗರದ ಮತದಾರರು ಭಾಗವಹಿಸಲು ಮಹದೇವ ಮಾಳಿ ಅವರು ಸ್ಫೂರ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಹಿರಿಯ ನಾಗರಿಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಭಾರತದ ಬುನಾದಿಯನ್ನು ಗಟ್ಟಿಗೊಳಿಸಿದ್ದಾರೆ ಎಂದು ಹೇಳಿದರು.
ಮನೆಯಿಂದಲೇ ಮತದಾನ ಮಾಡಿದ ಮಹಾದೇವ ಮಾಳಿ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಎಷ್ಟೊಂದು ಅಮೂಲ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ರಾಜೀವ ಕುಮಾರ ಹೇಳಿದರು. ಭಾರತ ಚುನಾವಣಾ ಆಯೋಗವು ಪ್ರತಿಯೊಬ್ಬರ ಒಳಗೊಳ್ಳುವಿಕೆ ಮತ್ತು ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದಕ್ಕೆ ಬದ್ಧವಾಗಿದೆ ಎಂದರು.
ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಾಗದವರಿಗಾಗಿ ಮನೆಗೆ ಮತಗಟ್ಟೆ ಕೊಂಡೊಯ್ಯವುದಕ್ಕೆ ಬದ್ಧವಾಗಿದೆ.
80 ವರ್ಷ ಮೇಲ್ಪಟ್ಟಿರುವವರು ಹಾಗೂ ಶೇ.40 ರಷ್ಟು ಅಂಗವೈಕಲ್ಯ ಹೊಂದಿರುವ ವಿಕಲಚೇತನರಿಗೆ ಇದೇ ಮೊದಲ ಬಾರಿ ಮನೆಯಿಂದಲೇ ಮತದಾನ ಮಾಡುವ ಐಚ್ಛಿಕ ಅವಕಾಶವನ್ನು ಒದಗಿಸಲಾಗಿರುತ್ತದೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರಸಕ್ತ ವಿಧಾನ ಸಭಾ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟಿರುವ 7362 ಕ್ಕೂ ಅಧಿಕ ಜನರು ಹಾಗೂ 1708 ವಿಕಲಚೇತನರು ಮನೆಯಿಂದಲೇ ಮತದಾನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 29 ರಿಂದ ಆರಂಭಗೊಂಡಿರುವ ಮತದಾನ ಪ್ರಕ್ರಿಯೆಯಲ್ಲಿ ಇದುವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ 6975 ಹಿರಿಯರು ಮತ್ತು 1661 ವಿಕಲಚೇತನರು ಮನೆಯಿಂದಲೇ ತಮ್ಮ ಮತವನ್ನು ಚಲಾಯಿಸಿರುತ್ತಾರೆ ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ ಕುಮಾರ ತಿಳಿಸಿದರು.
ಆಯೋಗಕ್ಕೆ ಕೃತಜ್ಞತೆ ಸಲ್ಲಿಸಿದ ಶತಾಯುಷಿ:
ಸ್ವತಃ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರೇ ದೂರವಾಣಿ ಕರೆ ಮಾಡಿದಾಗ ಅತ್ಯಂತ ಸಂತೋಷದಿಂದ ಅವರೊಡನೆ ಮಾತನಾಡಿದ ಮಹದೇವ ಮಾಳಿ ಅವರು ತಮ್ಮಂತಹ ಹಿರಿಯರಿಗೆ ಇದೇ ಪ್ರಥಮ ಬಾರಿ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದ ಚುನಾವಣಾ ಆಯೋಗಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಹಿಂದೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಇಲ್ಲದಿರುವಾಗ ಗಾಲಿಕುರ್ಚಿಯಲ್ಲಿ ಮತಗಟ್ಟಿಗೆ ತೆರಳಿ ಮತದಾನ ಮಾಡಿರುವುದನ್ನು ನೆನಪಿಸಿಕೊಂಡರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ನಾಗರಿಕರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಬೆಳಗಾವಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧಕ್ಷರಾದ ಹರ್ಷಲ್ ಭೋಯರ್, ಚಿಕ್ಕೋಡಿ-ಸದಲಾಗಾ ಚುನಾವಣಾಧಿಕಾರಿ ಮಾಧವ ಗಿತ್ತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.