ಲಖನೌ : ಮೂತ್ರಪಿಂಡದಲ್ಲಿದ್ದ ಕಲ್ಲು ತೆಗೆಸಿಕೊಳ್ಳಲು ಹೋದ ವ್ಯಕ್ತಿಯ ಮೂತ್ರಪಿಂಡವನ್ನೇ ತೆಗೆದು ಹಾಕಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಅಲಿಘರ್‌ನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
53 ವರ್ಷದ ಹೋಮ್ ಗಾರ್ಡ ಇತ್ತೀಚೆಗೆ ಅಲಿಘರ ಖಾಸಗಿ ಆಸ್ಪತ್ರೆಯಲ್ಲಿ ಮೂತ್ರಪಿಂಡದ ಕಲ್ಲು ತೆಗೆಸಲು ಹೋಗಿದ್ದಾರೆ. ಆದರೆ ಈ ವೇಳೆ ಅವರ ಎಡ ಮೂತ್ರಪಿಂಡವನ್ನು ತೆಗೆದು ಹಾಕಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.
ಸುರೇಶ ಚಂದ್ರ ಅವರು ಇತ್ತೀಚೆಗೆ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ನೋವನ್ನು ಅನುಭವಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಅಲ್ಟ್ರಾಸೌಂಡ್ ವರದಿಯಲ್ಲಿ ಅವರ ಎಡ ಮೂತ್ರಪಿಂಡ ಕಾಣೆಯಾಗಿದೆ ಎಂದು ತೋರಿಸಿದೆ.
ಅಕ್ಟೋಬರ 29 ರಂದು ನನ್ನ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದ್ದರಿಂದ ನಾನು ಕಾಸಗಂಜನಲ್ಲಿ ವೈದ್ಯರನ್ನು ಸಂಪರ್ಕಿಸಿದೆ. ಅವರು ನನ್ನ ಹಿಂದಿನ ವರದಿಗಳನ್ನು ನೋಡಿದ ನಂತರ ಮತ್ತು ನನ್ನ ಹೊಟ್ಟೆಯ ಎಡಭಾಗದಲ್ಲಿ ಉದ್ದವಾದ ಅಡ್ಡ ಶಸ್ತ್ರಚಿಕಿತ್ಸೆಯ ಗುರುತು ಬಗ್ಗೆ ಪ್ರಶ್ನಿಸಿದ ನಂತರ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸುವಂತೆ ತಿಳಿಸಿದರು. ಸ್ಕ್ಯಾನಿಂಗ್ ವರದಿಯಲ್ಲಿ ಎಡಭಾಗದ ಕಿಡ್ನಿ ಕಾಣೆಯಾಗಿದೆ ಎಂದು ವೈದ್ಯರು ತಿಳಿಸಿದರು.
ಕಿಡ್ನಿ ಹರಳು ತೆಗೆಯುವ ನೆಪದಲ್ಲಿ ವೈದ್ಯರು ಕಿಡ್ನಿ ಕದ್ದೊಯ್ದರೂ ಸೂಕ್ತ ಪ್ರತಿಕ್ರಿಯೆ ಬಾರದಿದ್ದಾಗ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಇಡೀ ಘಟನೆಯ ಬಗ್ಗೆ ಅವರು ನನಗೆ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ ಎಂದು ಸುರೇಶ ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಯ ವೈದ್ಯರು ಮೊದಲು ಏಪ್ರಿಲ್ 15 ಕ್ಕೆ ಆಪರೇಷನ್ ನಿಗದಿಪಡಿಸಿದ್ದರು. ಆದರೆ ಅವರು ನನ್ನ ಸಂಬಂಧಿಕರು ಬರುವವರೆಗೆ ಕಾಯಲು ನಿರಾಕರಿಸಿ ಒಂದು ದಿನ ಮುಂಚಿತವಾಗೇ ತರಾತುರಿಯಲ್ಲಿ ಆಪರೇಷನ್ ಮಾಡಿದರು.
ನಾನು ಅರಿವಳಿಕೆಯಲ್ಲಿದ್ದ ಕಾರಣ ಆಪರೇಷನ್ ಮಾಡಿದ ವೈದ್ಯರ ಗುರುತನ್ನು ನಿಖರವಾಗಿ ನೆನಪಿಸಿಕೊಳ್ಳಲು ಆಗುತ್ತಿಲ್ಲ. 28,000 ರೂಪಾಯಿ ಬಿಲ್ ಪಾವತಿಸಿ ನನ್ನನ್ನು ಬಿಡುಗಡೆ ಮಾಡುವ ಮೊದಲು ನನ್ನ ಕುಟುಂಬ ಸದಸ್ಯರಿಗೂ ನನ್ನನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಸಂತ್ರಸ್ತ ಸುರೇಶ್ ಆರೋಪಿಸಿದ್ದಾರೆ.
ಇನ್ನು ಪ್ರಕರಣ ಗಮನಕ್ಕೆ ಖಾಸಗಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ತನಿಖೆಗೆ ಆದೇಶ ಹೊರಡಿಸಿದ್ದಾರೆ.