ಬೆಳಗಾವಿ : ಆಡಳಿತ ವಿರೋಧಿ ಅಲೆ 18 ಕ್ಷೇತ್ರವುಳ್ಳ ಬೆಳಗಾವಿ ಜಿಲ್ಲೆಯಲ್ಲೂ ಕಂಡು ಬರುತ್ತಿದ್ದು, ಬಿಜೆಪಿ ಈಗಿರುವ ಕನಿಷ್ಠ ನಾಲ್ಕು ಸ್ಥಾನ ಕಳೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ. ಈ ಸಂಖ್ಯೆ ಹೆಚ್ಚಾದರೂ ಆಶ್ಚರ್ಯಪಡಬೇಕಿಲ್ಲ.
ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ಚುನಾವಣಾ ಪೂರ್ವದ ಸ್ಥಿತಿ ಕುರಿತು ಸಲ್ಲಿಸಿರುವ ಮಾಹಿತಿ ವರದಿ ಪ್ರಕಾರ ಅತೀ ದೊಡ್ಡ ಬೆಳಗಾವಿ ಜಿಲ್ಲೆಯಲ್ಲೂ ಆಡಳಿತ ವಿರೋಧಿ ಅಲೆಯಿದ್ದು, ಬಿಜೆಪಿ ಶಾಸಕರ ವಿರುದ್ಧದ ಅಭಿಪ್ರಾಯವಿದೆ. ಹಿಂದೂತ್ವದ ಅಲೆಯಲ್ಲಿ ಗೆದ್ದು ಬಂದಿರುವ ಬಿಜೆಪಿ ಶಾಸಕರಲ್ಲಿ ಬಹುತೇಕರು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದು ಎಂದೂ ಇಲ್ಲದಷ್ಟು ಭ್ರಷ್ಟಾಚಾರದ ವರದಿಗಳು ಜನರ ಕಣ್ಮುಂದೆ ಇವೆ. ತಮ್ಮನ್ನು ಗೆಲ್ಲಿಸಿರುವ ಮತದಾರರಿಗೂ ಅವರು ಲಭ್ಯವಾಗುತ್ತಿಲ್ಲ. ಹಾಗಾಗಿ ಬಿಜೆಪಿ ಕನಿಷ್ಠ ನಾಲ್ಕು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ.
ಬಿಜೆಪಿ ಪಕ್ಷ ಮುಸ್ಲಿಮ ವಿರೋಧಿ ಅಜೆಂಡಾ ಹಿಡಿಯುವ ಮೊದಲು ಜಿಲ್ಲೆಯ ಎಲ್ಲ ಸ್ಥಾನ ಗೆದ್ದುಕೊಳ್ಳುತ್ತಿದ್ದ ಕಾಂಗ್ರೆಸ್, ಕಳೆದ ಚುನಾವಣೆಯಲ್ಲಿ 8 ಸ್ಥಾನ ಪಡೆದಿತ್ತು. ಆದರೆ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಗೋಕಾಕ, ಅಥಣಿ, ಕಾಗವಾಡ ಕ್ಷೇತ್ರದ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿ ಪುನಃ ಆಯ್ಕೆಯಾಗಿ ಬಿಜೆಪಿ ಸರಕಾರ ರಚನೆಗೆ ಕಾರಣರಾಗಿದ್ದರು.
ಆದರೆ ರಾಜ್ಯದಲ್ಲಿ ಕೇಳಿ ಬರುತ್ತಿರುವ ಎಂದೂ ಕೇಳರಿಯದ ಭ್ರಷ್ಟಾಚಾರ, ಜನ ವಿರೋಧಿ ನೀತಿ, ಕಳಪೆ ಕಾಮಗಾರಿ, ಸರಕಾರಿ ಕಚೇರಿಗಳಲ್ಲಿ ಹೆಚ್ಚಿರುವ ಲಂಚ, ಪೊಲೀಸ್ ದೌರ್ಜನ್ಯ, ಪಕ್ಷಪಾತತನ ಮುಂತಾದ ಕಾರಣಗಳಿಂದ ಜನ ನೆಮ್ಮದಿಯಾಗಿಲ್ಲ. ಸಾಮಾಜಿಕ ಸ್ವಾಸ್ಥ್ಯತೆ ಕುರಿತು ನೀಡಿರುವ ಯಾವ ಮನವಿಗೂ ಸರ್ಕಾರದಿಂದ ಸ್ಪಂದನೆ ದೊರೆಯುತ್ತಿಲ್ಲ, ಈ ಕಾರಣಗಳಿಂದ ಜನ ಬದಲಾವಣೆ ಬಯಸಿದ್ದಾರೆ ಎಂದು ವರದಿಯಲ್ಲಿ ಪ್ರಮುಖವಾಗಿ ಸೂಚಿಸಲಾಗಿದೆ. ಈ ಬಾರಿ ಬಿಜೆಪಿಯಿಂದ ಸವದತ್ತಿ, ಕಿತ್ತೂರು, ರಾಮದುರ್ಗ, ಕಾಗವಾಡ ಸೇರಿದಂತೆ ಇನ್ನೂ ಕೆಲ ಕ್ಷೇತ್ರಗಳನ್ನು ಕಾಂಗ್ರೆಸ್ ವಶ ಪಡಿಸಿಕೊಳ್ಳಲಿದೆ ಎನ್ನಲಾಗಿದೆ.
ಸವದತ್ತಿಯಿಂದ ಡಾ. ವಿಶ್ವಾಸ ವೈದ್ಯ, ಕಿತ್ತೂರಿನಿಂದ ಮಾಜಿ ಶಾಸಕ ಡಿ ಬಿ ಇನಾಮದಾರ ಅವರ ಅಳಿಯ ಅಪ್ಪಸಾಹೇಬ ಪಾಟೀಲ, ರಾಮದುರ್ಗದಿಂದ ಅಶೋಕ್ ಪಟ್ಟಣ ಮತ್ತು ಕಾಗವಾಡದಿಂದ ರಾಜು (ಭರಮಗೌಡ) ಕಾಗೆ ಸ್ಪರ್ಧಿಸಿದರೆ ಗೆಲುವು ಖಚಿತವೆನ್ನಲಾಗಿದೆ. ಆದರೆ, ಚುನಾವಣೆ ಕಣಕ್ಕಿಳಿಯುವ ಆಮ್ ಆದ್ಮಿ ಪಾರ್ಟಿ ಮತ್ತು ಅಸದುದ್ದೀನ ಓವೈಸಿಯ ಎಐಎಂಐಎಂ ಪಕ್ಷಗಳ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುತ್ತಲೇ ಬಂದಿದೆ ಎಂಬುದು ಹಿಂದೆ ಜರುಗಿದ ಕೆಲ ಫಲಿತಾಂಶಗಳು ಹೇಳುತ್ತವೆ. ಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಮತ್ತು ಎಐಎಂಐಎಂ ಪಕ್ಷಗಳು ಕಾಂಗ್ರೆಸ್ ಪಕ್ಷದ ಎಷ್ಟು ಪ್ರತಿಶತ ಓಟ ಬ್ಯಾಂಕ್ ಕಬಳಿಸುತ್ತವೆ ಎಂಬುದು ಕಾದು ನೋಡಬೇಕಿದೆ.
ಸಮದರ್ಶಿಗೆ ಲಭ್ಯವಾಗಿರುವ ಕಾಂಗ್ರೆಸ್ ನ ನಿಯೋಜಿತ ಪಟ್ಟಿ ಇಂತಿದೆ :
1. ಬೆಳಗಾವಿ ಉತ್ತರ : ಫಿರೋಜ ಸೇಠ
2. ಬೆಳಗಾವಿ ದಕ್ಷಿಣ : ಪ್ರಭಾವತಿ ಚಾವಡಿ/ ರಮೇಶ ಗೊರಲ್/ ಸರಳಾ ಸಾತಪುತೆ
3. ಬೆಳಗಾವಿ ಗ್ರಾಮೀಣ : ಲಕ್ಷ್ಮಿ ಹೆಬ್ಬಾಳಕರ
4. ಯಮಕನಮರಡಿ : ಸತೀಶ ಜಾರಕಿಹೊಳಿ
5. ಖಾನಾಪುರ : ಡಾ. ಅಂಜಲಿ ನಿಂಬಾಳ್ಕರ
6. ಬೈಲಹೊಂಗಲ : ಮಹಾಂತೇಶ ಕೌಜಲಗಿ
7: ಕಿತ್ತೂರು : ಅಪ್ಪಾಸಾಹೇಬ ಪಾಟೀಲ
8: ಸವದತ್ತಿ : ಡಾ. ವಿಶ್ವಾಸ ವೈದ್ಯ/ಅಜಯ ಚೋಪ್ರಾ
9. ರಾಮದುರ್ಗ : ಅಶೋಕ ಪಟ್ಟಣ
10. ನಿಪ್ಪಾಣಿ : ವೀರಕುಮಾರ ಪಾಟೀಲ
11. ರಾಯಭಾಗ : ಮಹಾವೀರ ಮೋಹಿತೆ
12. ಕುಡಚಿ : ಮಹೇಂದ್ರ ತಮ್ಮಣ್ಣವರ
13. ಹುಕ್ಕೇರಿ : ಎ ಬಿ ಪಾಟೀಲ / ವಿನಯ ಪಾಟೀಲ
14. ಅರಭಾವಿ : ಭೀಮಪ್ಪಾ ಗಡಾದ
15. ಗೋಕಾಕ : ಅಶೋಕ್ ಪೂಜಾರಿ/ ಡಾ. ಮಹಾವೀರ ಕಡಾಡಿ/ ಚಂದ್ರಶೇಖರ ಕೊಣ್ಣೂರ
16. ಅಥಣಿ : ಧರೆಪ್ಪ ಟಕ್ಕನ್ನವರ/ ಎಸ್ ಕೆ ಭೂಟಾಳೆ
17. ಕಾಗವಾಡ : ರಾಜು ಕಾಗೆ
18. ಚಿಕ್ಕೋಡಿ : ಕಾಕಾಸಾಹೇಬ ಪಾಟೀಲ