ದೋಹಾ(ಕತಾರ್) : ಕರ್ನಾಟಕ ಸಂಘ, ಕತಾರ್ ವತಿಯಿಂದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ 162 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ 2022ರ ಇಂಜಿನೀಯರ ದಿನಾಚರಣೆಯನ್ನು ಆಚರಿಸಲಾಯಿತು.
ಕೊಲ್ಲಿ ರಾಷ್ಟ್ರ ಕತಾರ್ ನ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಜಿನಿಯರ್ ಹೇಮಚಂದ್ರನ್ ಅವರು ತಂತ್ರಜ್ಞಾನ ಹಾಗೂ ಅದರಿಂದ ಜೀವನಶೈಲಿಗಳ ಮೇಲೆ ಪರಿಣಾಮ, ಕಿಶೋರ, ವೆಂಕಟೇಶ ಅವರು “ವಿದ್ಯುತ್ ಉತ್ಪಾದನೆ ಹಾಗೂ ಅದರ ಪ್ರಯೋಜನ” ಮತ್ತು ಪ್ರದೀಪ ಕುಮಾರ ದಿಲೀಪ ಅವರು “ವೈಮಾನಿಕ ಕ್ಷೇತ್ರದಲ್ಲಿ ಡ್ರೋನ್ ಗಳ ಬಳಕೆ” ವಿಷಯಗಳ ಬಗ್ಗೆ ತಾಂತ್ರಿಕ ಮಾಹಿತಿಗಳನ್ನು ಸಭೆಗೆ ನೀಡಿದರು.
ಮಹೇಶ್ ಗೌಡ ಮಾತನಾಡಿ, ಬಾಲ್ಯದ ದಿನಗಳಲ್ಲಿ ಸರ್ ಎಂ.ವಿ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿದ್ದು ನೆನಪಿಸಿಕೊಂಡರು. ಸರ್ ಎಂ ವಿ ಅವರು ಭಾರತದ ಲಕ್ಷಾಂತರ ಯುವಕರಿಗೆ, ಇಂಜಿನಿಯರ್‌ಗಳಾಗಲು ಸ್ಫೂರ್ತಿ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.
ಕರ್ನಾಟಕ ಸಂಘ ಆಯೋಜಿಸಿದ ಕಾರ್ಯಕ್ರಮಕ್ಕೆ ಹಾಜರಾಗಿ ಹಾಗೂ ಬೆಂಬಲಿಸಿದ ಎಲ್ಲಾ ಸಭಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಇನ್ನು ಪಿ.ಎನ್.ಬಾಬುರಾಜನ್ ಅವರು ಮಾತನಾಡಿ, ತಮ್ಮ ಭಾಷಣದಲ್ಲಿ ಕರ್ನಾಟಕ ಸಂಘ ಕತಾರ್ ಇಂಜಿನಿಯರ್‌ಗಳ ದಿನಾಚರಣೆಯನ್ನು ಆಚರಿಸುತ್ತಿರುವುದನ್ನು ಶ್ಲಾಘಿಸಿದರು. ಮುಂದಿನ ವರ್ಷ ಈ ಆಚರಣೆಯನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ ಎಲ್ಲಾ ಭಾರತೀಯ ಇಂಜಿನಿಯರ್‌ಗಳು ಮತ್ತು ಅಂಗಸಂಸ್ಥೆಗಳನ್ನು ಆಹ್ವಾನಿಸುವ ಮೂಲಕ ದೊಡ್ಡ ಮಟ್ಟದಲ್ಲಿ ನಡೆಸಬೇಕೆಂದು ವಿನಂತಿಸಿದರು.
ಗೌರವ ಅತಿಥಿಯಾಗಿ ಅಮೀರ ಅವರು ಮಾತನಾಡಿ, ತಮ್ಮ ಭಾಷಣದಲ್ಲಿ ಇಂಜಿನಿಯರಿಂಗ್ ವಿಕಾಸ ಮತ್ತು ಅವರು ಇಂಜಿನಿಯರ್ ಆಗಲು ಅವರಿಗೆ ಸಿಕ್ಕ ಪ್ರೇರಣೆಯ ಕುರಿತು ಅವಲೋಕನವನ್ನು ನೀಡಿದರು. ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಗೌರವಾನ್ವಿತ ಅತಿಥಿಗಳು ಮತ್ತು ತಾಂತ್ರಿಕ ಭಾಷಣಕಾರರಿಗೆ ಸ್ಮರಣಿಕೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಕರ್ನಾಟಕ ಸಂಘ ಕತಾರ್‌ನ ಪ್ರಧಾನ ಕಾರ್ಯದರ್ಶಿ ಪ್ರದೀಪಕುಮಾರ ದಿಲೀಪ ನಿರ್ವಹಿಸಿದರು ಮತ್ತು ವಂದನಾರ್ಪಣೆಯನ್ನು ಕರ್ನಾಟಕ ಸಂಘ ಕತಾರ್‌ನ ಕೋಶಾಧಿಕಾರಿ ರಮೇಶ ಅವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರು ಶ್ರೀ ಪಿ.ಎನ್. ಬಾಬುರಾಜನ್, ಗೌರವ ಅತಿಥಿಗಳಾಗಿ ಇಂಜಿನಿಯರ್ ಎಂ.ಜಿ. ಅಮೀರ ಫರೋಖಜಾದ, ಕತಾರ್ ಕೆಮಿಕಲ್ ಲಿಮಿಟೆಡ್‌ನ ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಇಂಜಿನಿಯರ್ ಮೊಹಮ್ಮದ ಅಲ್-ಜೌಬಿ, ಪ್ರಾಜೆಕ್ಟ್ ಇಂಜಿನಿಯರ, ಕತಾರ್ ಕೆಮಿಕಲ್ ಲಿಮಿಟೆಡ್. ಪ್ರಧಾನ ಟೆಕ್ನಿಕಲ್ ಕೀನೋಟ್ ಸ್ಪೀಕರ್ ಇಂಜಿನಿಯರ್ ಹೇಮಚಂದ್ರನ್, ಸೀನಿಯರ್ ಜನರಲ್ ಮ್ಯಾನೇಜರ ಇನಫ್ರಾಸ್ಟ್ರಕ್ಚರ್ ಮತ್ತು ಫೆಸಿಲಿಟಿ ಮ್ಯಾನೇಜ್‌ಮೆಂಟ, ಗಲ್ಫಾರ್ ಅಲ್ ಮಿಶಾದ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರು ಸುಬ್ರಹ್ಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘ ಕತಾರ್‌ನ ಸಲಹಾ ಮಂಡಳಿಯ ಸದಸ್ಯರು ಮತ್ತು ಕರ್ನಾಟಕ ಸಂಘ ಕತಾರ್‌ನ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.