ಬೆಳಗಾವಿ : ಬುಧವಾರ ಸಂಜೆ ಕರ್ನಾಟಕ ಲಾ ಸಂಸ್ಥೆಯ ಪ್ರತಿಷ್ಠಿತ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಪದವಿಪೂರ್ವ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಹಾಡಿಗೆ ಕನ್ನಡ ಬಾವುಟ ಹಿಡಿದು ನೃತ್ಯ ಮಾಡಿದ್ದ ವಿದ್ಯಾರ್ಥಿಯನ್ನು ಪೊಲೀಸ್ ಠಾಣೆಯಲ್ಲಿ ಪೊಲೀಸರೂ ಸಹ ಥಳಿಸಿದ್ದಾರೆಂದು ಆರೋಪಿಸಲಾಗಿದೆ.
ಕಾರ್ಯಕ್ರಮದ ನಂತರ ಕೆಲ ವಿದ್ಯಾರ್ಥಿಗಳನ್ನು ಟಿಳಕವಾಡಿ ಠಾಣೆಗೆ ಕರೆಸಿಕೊಂಡ ಪೊಲೀಸರು “ಈ ಗಲಾಟೆಗೆಲ್ಲ ನೀನೇ ಕಾರಣ, ನಿನ್ನನ್ನು ಒದ್ದು ಒಳಗೆ ಹಾಕುತ್ತೇನೆ” ಎಂದು ಬೆದರಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆತನ ಕೆನ್ನೆಗೆ ಏಟು ಹಾಕಿದರು ಎಂದು ಪೊಲೀಸ್ ಠಾಣೆಯಲ್ಲಿದ್ದವರು ತಿಳಿಸಿದ್ದಾರೆ.
ಈ ಪ್ರಕರಣದಿಂದ ಕರ್ನಾಟಕದಲ್ಲಿ ಕನ್ನಡ ಮಾತನಾಡುವದೇ ಅಪಾಯವೆನ್ನುವದಕ್ಕೆ ಸಾಕ್ಷಿಯಾಗಿದೆ. ಪೊಲೀಸ್ ಅಧಿಕಾರಿಯು ಒಂದು ವೇಳೆ ಠಾಣೆಯಲ್ಲಿ ವಿದ್ಯಾರ್ಥಿಯನ್ನು ಹೊಡೆದದ್ದು ನಿಜವಾಗಿದ್ದರೆ ಅದು ಖಂಡನೀಯ, ಥಳಿಸಿದ ಪೊಲೀಸ್ ಅಧಿಕಾರಿಯು ವಿದ್ಯಾರ್ಥಿಯ ಮತ್ತು ಕನ್ನಡಿಗರ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯವೆಂದು ಕನ್ನಡ ಸಂಘಟನೆಗಳು ಎಚ್ಚರಿಸಿವೆ.
ಕನ್ನಡ ವಿದ್ಯಾರ್ಥಿಯನ್ನು ಥಳಿಸಿದ ಮರಾಠಿ ವಿದ್ಯಾರ್ಥಿಗಳ ಕುರಿತು ಯಾವ ಕ್ರಮ ಜರುಗಿಸಲಾಗಿದೆ ಎಂದು ತಿಳಿದು ಬಂದಿಲ್ಲ. ಕನ್ನಡ ವಿದ್ಯಾರ್ಥಿ ದೂರು ದಾಖಲಿಸದಿರುವದರಿಂದ ಹಾಗು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲರಿಗೂ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಗೋಗಟೆ ವಾಣಿಜ್ಯ ಮಹಾವಿದ್ಯಾಲಯ ಬುಧವಾರ ಸಂಜೆ ತನ್ನ ಕಾಲೇಜು ಕ್ಯಾಂಪಸ್ ನಲ್ಲಿ ಅಂತರ ಮಹಾವಿದ್ಯಾಲಯಗಳ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಆಗ ಕನ್ನಡದ ಹಾಡಿಗೆ ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಡಾನ್ಸ್ ಮಾಡಿದ್ದರು. ಇದನ್ನು ಸಹಿಸಿಕೊಳ್ಳದೇ ಮರಾಠಿ ಭಾಷಿಕರೆಂದು ಹೇಳಲಾದ ಕೆಲ ವಿದ್ಯಾರ್ಥಿಗಳು ಬಾವುಟ ಹಿಡಿದು ಡಾನ್ಸ್ ಮಾಡಿದ ವಿದ್ಯಾರ್ಥಿಯನ್ನು ಥಳಿಸಿದ್ದರು.
ಹೊಡೆದಾಟದಲ್ಲಿ ಭಾಗಿಯಾಗಿದ್ದ ಎಲ್ಲ ವಿದ್ಯಾರ್ಥಿಗಳ ವಿಚಾರಣೆ ಮಾಡಲಾಗುತ್ತಿದೆ. ಕೆಲ ವಿದ್ಯಾರ್ಥಿಗಳು ಭೂಗತರಾಗಿದ್ದು ಅವರ ಹುಡುಕಾಟ ಜಾರಿಯಲ್ಲಿದೆ ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ.