ಬೆಂಗಳೂರು: 66ನೇ ವಯಸ್ಸಿಗೆ ವಿವಾಹವಾದ ಜೋಡಿಯ ದಾಂಪತ್ಯ ಜೀವನ ಒಂದೇ ತಿಂಗಳಲ್ಲಿ ಅಂತ್ಯವಾಗಿದ್ದು, ಪತ್ನಿಗೆ ಮಧ್ಯಂತರ ಜೀವನಾಂಶ ಪಡೆಯುವ ಹಕ್ಕಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
66ನೇ ವಯಸ್ಸಿನಲ್ಲಿ 58 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ ಮೈಸೂರು ಮೂಲದ ಜೋಡಿ ಒಂದೇ ತಿಂಗಳಿಗೆ ದೂರವಾಗಿದ್ದು, ಪತ್ನಿ ಜೀವನಾಂಶಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
2020ರ ಏಪ್ರಿಲ್ 29ರಂದು 66 ವರ್ಷದ ವ್ಯಕ್ತಿ 58 ವರ್ಷದ ಮಹಿಳೆಯನ್ನು ವಿವಾಹವಾಗಿದ್ದರು. ಆದರೆ ಒಂದೇ ತಿಂಗಳಿಗೆ ಅವರ ದಾಂಪತ್ಯ ಅಂತ್ಯಗೊಂಡಿದ್ದು, ಪತಿಯನ್ನು ತೊರೆದ ಪತ್ನಿ ವಿಚ್ಛೇದನಕ್ಕಾಗಿ ಹಾಗೂ ಪತಿಯಿಂದ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ನಂತರ ವಿಚ್ಛೇದನ ಅರ್ಜಿ ಹಿಂಪಡೆದಿದ್ದ ಮಹಿಳೆ ಜೀವನಾಂಶಕ್ಕಾಗಿ ಕೋರಿದ್ದರು. ಪತಿ, ಪತ್ನಿಗೆ 7 ಸಾವಿರ ರೂ. ಜೀವನಾಂಶ ನೀಡಬೇಕು ಎಂದು ಮೈಸೂರು ಕೋರ್ಟ್ ಆದೇಶ ನೀಡಿತ್ತು. ಇದಕ್ಕೆ ಒಪ್ಪದ ಪತಿ ಮೈಸೂರು ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ತನಗೆ 67 ವರ್ಷವಾಗಿರುವುದರಿಂದ ಜೀವನಾಂಶ ನೀಡಲು ಸಾಧ್ಯವಿಲ್ಲ. ಸಹಬಾಳ್ವೆಗೆ ಸಿದ್ಧನಿರುವುದರಿಂದ ಜೀವನಾಂಶ ವಿಧಿಸದಂತೆ ಮನವಿ ಮಾಡಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ, ವಿಚ್ಛೇದನ ಅರ್ಜಿ ಹಿಂಪಡೆದರೂ ಪತ್ನಿ ಜೀವನಾಂಶಕ್ಕೆ ಅರ್ಹಳು. ಪತ್ನಿಗೆ ಜೀವನಾಂಶ ನೀಡುವುದು ಪತಿಯ ಕರ್ತವ್ಯ. ಮಧ್ಯಂತರ ಜೀವನಾಂಶ ಪಡೆಯುವ ಹಕ್ಕು ಕೂಡ ಪತ್ನಿಗೆ ಇರುತ್ತದೆ. ಹಾಗಾಗಿ ಪತ್ನಿಗೆ ಜೀವನಾಂಶ ಕೊಡುವಂತೆ ಮಹತ್ವದ ಆದೇಶ ನೀಡಿದ್ದಾರೆ. ಈ ಮೂಲಕ ಮೈಸೂರು ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದೆ.