ಬೆಳಗಾವಿ: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿರುವ ಮರಾಠಿ ಭಾಷಿಕರಿಗೆ ಮರಾಠಿ ಭಾಷೆಯಲ್ಲಿಯೇ ಸರ್ಕಾರಿ ದಾಖಲೆಗಳನ್ನು ಒದಗಿಸಬೇಕು ಎಂದು ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಠರಾವು ಪಾಸ್ ಮಾಡಲಾಗಿದೆ.
ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ರವಳನಾಥ ಪಂಚಕ್ರೋಶಿ ಸಾಹಿತ್ಯ ಅಕಾಡೆಮಿ ವತಿಯಿಂದ ರವಿವಾರ ನಡೆದ 17ನೇ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕೇಂದ್ರ ಸರ್ಕಾರ ಕೂಡಲೇ ಈ ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಠರಾವು ಕೈಗೊಂಡರು.
ಗಡಿ ಭಾಗದಲ್ಲಿ ನಡೆಯುವ ಮರಾಠಿ ಸಾಹಿತ್ಯ ಸಮ್ಮೇಳನಗಳು ಸಾಹಿತ್ಯ ಹಾಗೂ ಸಂಸ್ಕೃತಿಯ ಅವಿಭಾಜ್ಯ ಅಂಗ. ಮರಾಠಿ ಭಾಷಿಕರು ಕಳೆದ ಆರು ದಶಕಗಳಿಂದ ಗಡಿ ಹೋರಾಟ ನಡೆಸುತ್ತ ಬಂದಿದ್ದಾರೆ. ಇದಕ್ಕೆ ಸಾಹಿತ್ಯ ಸಮ್ಮೇಳನಗಳ ಬೆಂಬಲವೂ ಇದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಪ್ರತಿ ವರ್ಷ ಸಾಹಿತ್ಯ ಸಮ್ಮೇಳನಗಳಿಗೆ ಎರಡು ತಿಂಗಳ ಮುಂಚಿತವಾಗಿಯೇ ಕನಿಷ್ಠ 5 ಲಕ್ಷ ರೂ. ಅನುದಾನವನ್ನು ಆಯಾ ಸಂಸ್ಥೆಗಳ ಖಾತೆಗೆ ಜಮಾ ಮಾಡಬೇಕು. ಜತೆಗೆ ಗಡಿ ಭಾಗದವರಿಗೆ ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಸಮ್ಮೇಳನಾಧ್ಯಕ್ಷ ಪ್ರಾಚಾರ್ಯ ಯಶವಂತ ಪಾಠಣೆ ಮಾತನಾಡಿ, ಧರ್ಮ, ಭಾಷಾ ದ್ವೇಷದಿಂದಾಗಿ ಸಂಸ್ಕೃತಿ ಹಾನಿ ಆಗುತ್ತಿದೆ. ಮನುಷ್ಯನಿಗೆ ಮಾತೃಭಾಷೆ ಮತ್ತು ಸಂಸ್ಕೃತಿ ಮೂಲತಃ ಹಕ್ಕಿನಿಂದಲೇ ಸಿಗುತ್ತವೆ. ಮಾತೃಭಾಷೆ ಎನ್ನುವುದು ಶಿಕ್ಷಣ , ಜ್ಞಾನ ಹಾಗೂ ಸಂಸ್ಕೃತಿಯ ಪ್ರಗತಿಗಾಗಿ ಪ್ರೇರಣೆ ಆಗಿರುತ್ತದೆ. ಆ ಜ್ಞಾನ ಮಾತೃಭಾಷೆಯಲ್ಲಿ ಸಿಕ್ಕವರಿಗೆ ಸಂಸ್ಕೃತಿಯ ಸುಗಂಧ ಇರುತ್ತದೆ. ನಮ್ಮ ಸಂಸ್ಕೃತಿ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಸಂದೇಶ ನೀಡುತ್ತದೆ ಎಂದರು.
ಸಮ್ಮೇಳನ ಉದ್ಘಾಟನೆ ಮುನ್ನ ಗ್ರಂಥ ದಿಂಡಿ ಮೆರವಣಿಗೆ ನಡೆಯಿತು. ನಂತರ ವಿವಿಧ ವಿಷಯಗಳ ಮೇಲೆ ಗೋಷ್ಠಿಗಳು ನಡೆದವು.