ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ಖ್ಯಾತ ನಟಿ ಅಭಿನಯ ಅವರಿಗೆ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ ಆದೇಶ ನೀಡಿದೆ.
ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ನಟಿ ಅಭಿನಯ ಹಾಗೂ ಅವರ ತಾಯಿ ಜಯಮ್ಮ ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿ, ಹೈಕೋರ್ಟ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ನಟಿ ಅಭಿನಯಾ ಅವರಿಗೆ 2 ವರ್ಷ ಜೈಲು ಶಿಕ್ಷೆ, ಅವರ ತಾಯಿ ಜಯಮ್ಮ ಅವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಭಿನಯ ಅವರ ಅಣ್ಣನ ಪತ್ನಿ ಲಕ್ಷ್ಮೀ ದೇವಿ ಅವರು ವಿರುದ್ಧ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ್ದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಕನ್ನಡ ಸಿನೆಮಾ ನಟಿ ಹಾಗೂ ಕಿರುತೆರೆ ಕಲಾವಿದೆ ಅಭಿನಯಾ ಮತ್ತು ಅವರ ತಾಯಿ ಜಯಮ್ಮ ಅವರಿಗೆ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದ ಹಿನ್ನೆಲೆ:
1998ರಲ್ಲಿ ಶ್ರೀನಿವಾಸ ಮತ್ತು ಲಕ್ಷ್ಮೀದೇವಿ ವಿವಾಹವಾಗಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣಿಯಾಗಿ 80 ಸಾವಿರ ರೂಪಾಯಿ ಮತ್ತು ಚಿನ್ನಾಭರಣವನ್ನು ಪಡೆದಿದ್ದರು. ಬಳಿಕ ಮತ್ತೆ ಹಣ ತರುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಬೇಸತ್ತ ಲಕ್ಷ್ಮೀದೇವಿ 2002ರಲ್ಲಿಯೇ ಇವರೆಲ್ಲರ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು.
2012ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ ಕೋರ್ಟ, ಅಭಿನಯ ಸೇರಿದಂತೆ ಅವರ ಐವರು ಸಂಬಂಧಿಕರಿಗೆ (ಜಯಮ್ಮ, ಅಭಿನಯಾ, ರಾಮಕೃಷ್ಣ, ಚೆಲುವರಾಜು ಮತ್ತು ಲಕ್ಷೀದೇವಿಯವರ ಪತಿ ಶ್ರೀನಿವಾಸ್) ತಲಾ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದರು.
ಶಿಕ್ಷೆಗೊಳಗಾದವರು ಸಲ್ಲಿಸಿದ್ದ ಮೇಲ್ಮನವಿ ಪರಿಗಣಿಸಿದ ಜಿಲ್ಲಾ ನ್ಯಾಯಾಲಯವು ಐವರನ್ನೂ ಖುಲಾಸೆಗೊಳಿಸಿತ್ತು. ಆದರೆ ಲಕ್ಷ್ಮೀದೇವಿ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲಕ್ಷ್ಮೀದೇವಿ ಅವರು ಹೈಕೋರ್ಟ ಮೊರೆ ಹೋಗಿದ್ದರು.
ನ್ಯಾಯಾಲಯ ರಾಮಕೃಷ್ಣ, ಚೆಲುವರಾಜು ಮತ್ತು ಲಕ್ಷೀದೇವಿಯವರ ಪತಿ ಶ್ರೀನಿವಾಸ ಅವರನ್ನು ಖುಲಾಸೆಗೊಳಿಸಿ ಅಭಿನಯ ಮತ್ತು ಅವರ ತಾಯಿ ಜಯಮ್ಮ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ.