ಜಾಮೀನಿಗಾಗಿ ಈಗ ಸುಪ್ರೀಮ ಕೋರ್ಟ ಮೊರೆ ಹೋದ ಪತ್ರಕರ್ತ ಸಿದ್ಧಿಕ ಕಪ್ಪನ್

A B Dharwadkar
ಜಾಮೀನಿಗಾಗಿ ಈಗ  ಸುಪ್ರೀಮ ಕೋರ್ಟ ಮೊರೆ ಹೋದ ಪತ್ರಕರ್ತ ಸಿದ್ಧಿಕ ಕಪ್ಪನ್
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ತಿರುವನಂತಪುರಂ : 2020 ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದಾಗ ಬಂಧಿಸಲಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕ ಕಪ್ಪನ್ ಈಗ ಜಾಮೀನು ಕೋರಿ ಸುಪ್ರೀಮ ಕೋರ್ಟಗೆ ಅರ್ಜಿ ಸಲ್ಲಿಸಿದ್ದಾರೆ.

ಹತ್ರಾಸ್ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆಯಡಿಯಲ್ಲಿ ದಾಖಲಾಗಿರುವುದರಿಂದ ಅವರ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟನ ಲಖನೌ ಪೀಠವು ತಿರಸ್ಕರಿಸಿತ್ತು.

ಸಿದ್ದಿಕ ಕಪ್ಪನ್ ಅವರು ಮಲಯಾಳಂ ಸುದ್ದಿ ಪೊರ್ಟಲ್‍ನ ವರದಿಗಾರರಾಗಿದ್ದರು. 2020 ಅಕ್ಟೋಬರ‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು ಅವರು ಹತ್ರಾಸ್‌ಗೆ ತೆರಳುತ್ತಿದ್ದರು. ಸಿದ್ದಿಕ್ ಸೇರಿದಂತೆ ಮೂವರನ್ನು ಹಾದಿ ಮಧ್ಯದಲ್ಲೆ ಪೊಲೀಸರು ಬಂಧಿಸಿದ್ದರು.

ಬಂಧಿತ ಪತ್ರಕರ್ತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), ಸೆಕ್ಷನ್ 124 ಎ (ದೇಶದ್ರೋಹ), ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಸೆಕ್ಷನ್ 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಸೆಕ್ಷನ್ 17 ಮತ್ತು 18 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು.

ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 65, 72 ಮತ್ತು 75 ರ ಧಾರ್ಮಿಕ ಭಾವನೆಗಳ ಕದಡುವ ಹುನ್ನಾರವನ್ನು ಆ ಪತ್ರಕರ್ತನ ಮೇಲೆ ಹೇರಲಾಗಿದೆ.

ಪತ್ರಕರ್ತ ಕಪ್ಪನ್ ಮತ್ತು ಇತರ ಸಹ-ಆರೋಪಿಗಳು ಉತ್ತರ ಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ವರದಿ ಮಾಡಲು ಹೊರಟಾಗ ಕಾನೂನನ್ನು ಪರಿಸ್ಥಿತಿಯನ್ನು ಭಂಗಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಮಥುರಾ ನ್ಯಾಯಾಲಯವು ಜುಲೈ 2021 ರಲ್ಲಿ ಕಪ್ಪನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಸದ್ಯ ಕೇರಳ ಜೈಲಿನಲ್ಲಿರುವ ಪತ್ರಕರ್ತ ಸಿದ್ದಿಕ್ ಕಪ್ಪನ್ ಜಾಮೀನು ಕೋರಿ ಸುಪ್ರೀಮ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಏನಿದು ಹತ್ರಾಸ್ ಪ್ರಕರಣ?

2020ರ ಸೆಪ್ಟೆಂಬರ್ 14ರಂದು ದಲಿತ ಯುವತಿ ತನ್ನ ತಾಯಿಯೊಂದಿಗೆ ಹುಲ್ಲು ತರಲೆಂದು ಜಮೀನಿಗೆ ತೆರಳಿದ್ದ ವೇಳೆ ನಾಲ್ವರು ಕಾಮುಕರು ಯುವತಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದರು.

ಅಷ್ಟೇ ಅಲ್ಲದೇ ಆ ನರರಾಕ್ಷಸರು ಆಕೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನು ಮೂಳೆಯನ್ನು ಮುರಿದು ಗಂಭೀರವಾಗಿ ಗಾಯಗೊಳಿಸಿದ್ದರು. ಬಳಿಕ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಆಕೆ ಬದುಕುಳಿಯಲಿಲ್ಲ

ಇದಾದ ಬಳಿಕವೇ ನಡೆದಿದ್ದು ಮತ್ತಷ್ಟು ಕಣ್ಣೀರುಬರಿಸುವ ಘಟನೆ. ಯುವತಿ ಸಾವನ್ನಪ್ಪಿದ ಬಳಿಕ ಪೋಷಕರಿಗೆ ಮಗಳ ಮುಖವನ್ನು ನೋಡಲು ಅವಕಾಶವನ್ನೇ ಉತ್ತರ ಪ್ರದೇಶದ ಪೊಲೀಸರು ಮಾಡಿಕೊಡಲಿಲ್ಲ. ಆಸ್ಪತ್ರೆ ಎದುರು ತಾಯಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದರೂ ಕಿವುಡು ಕಿವಿಗಳಿಗೆ ಅದು ಕೇಳಿಸಲೇ ಇಲ್ಲ. ಮಧ್ಯರಾತ್ರಿ 2.30ರ ವೇಳೆಗೆ ಪೊಲೀಸರೇ ಆಕೆಯ ಶವ ಸುಟ್ಟು ಹಾಕಿದ್ದಾರೆ.

ಬಳಿಕ ಆಕೆಯ ನಾಲಿಗೆಯನ್ನು ಕತ್ತರಿಸಿರಲಿಲ್ಲ, ಬೆನ್ನುಮೂಳೆಯೂ ಮುರಿದಿರಲಿಲ್ಲ, ಮೈಮೇಲೆ ಗಾಯವೇ ಇರಲಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದು ಪೋಷಕರನ್ನು ಮತ್ತಷ್ಟು ನೋವಲ್ಲಿ ನೂಕಿದಂತಾಗಿತ್ತು. ಇದೀಗ ಪೋಷಕರು ಮಗಳನ್ನೂ ಕಳೆದುಕೊಂಡು, ಆಕೆಯನ್ನು ಅಂತಿಮವಾಗಿ ನೋಡಲೂ ಆಗದೇ ಅಸಹಾಯಕತೆಯಿಂದ ನಿಂತಿದ್ದರು.

ನಮಗೆ ಹೇಳದೆಯೇ ಮಧ್ಯರಾತ್ರಿ ಸಂತ್ಯಕ್ರಿಯೆ ಮಾಡಿದ್ದೇಕೆ ಎಂಬುದು ಕುಟುಂಬ ಪ್ರಶ್ನೆ ಹಾಕಿತ್ತು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ ವರಿಷ್ಠ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ ಎಂದು ಯುವತಿ ತಾಯಿ ಆರೋಪಿಸಿದ್ದರು. ಮಗಳ ಮೂಳೆಗಳು ಮುರಿದಿರಲಿಲ್ಲ ಮತ್ತು ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರತು ಇರಲಿಲ್ಲ ಎಂದು ಡಿಸಿ, ಎಸ್ ಪಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿಮ್ಮ ಮನೆಯ ಮಗಳಿಗೆ ಈ ರೀತಿ ಆಗಿದ್ರೆ ನೀವು ಸುಮ್ಮನೆ ಇರ್ತಿದ್ದೀರಾ? ದಲಿತ ಬಡ ಕುಟುಂಬದ ಮಗಳ ಆಗಿದಕ್ಕೆ ಪ್ರಕರಣ ಮುಚ್ಚಿ ಹಾಕ್ತೀರಾ ಎಂದು ಸಂತ್ರಸ್ತೆ ತಾಯಿ ಆಕ್ರೋಶ ಹೊರ ಹಾಕಿದ್ದರು.

ಸಂತ್ರಸ್ತೆಯ ಅಂತ್ಯಕ್ರಿಯೆ ಮಾಡುವ ವೇಳೆ ಕುಟುಂಬಸ್ಥರು ಮನೆಯಲ್ಲಿ ಕೂಡಿ ಹಾಕಲಾಗಿತ್ತು ಎನ್ನಲಾಗಿದೆ. ನಸುಕಿನ ಜಾವ 2.30ರ ಸುಮಾರಿಗೆ ಯುವತಿಯ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಪೊಲೀಸರು ಮಾತ್ರ ಸ್ಥಳದಲ್ಲಿದ್ದರು. ಪತ್ರಕರ್ತರಿಗೂ ನಿರ್ಬಂಧ ಹೇರಿದ್ದರು. ಮೃತದೇಹ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಪೊಲೀಸರು ಕ್ಯಾರೇ ಎನ್ನದೇ ತಾವೇ ಎಲ್ಲ ಕಾರ್ಯಗಳನ್ನು ಮುಗಿಸಿಬಿಟ್ಟರು ಎಂದು ಕುಟುಂಬಸ್ಥರು ಕಣ್ಣಿರು ಹಾಕಿದ್ದರು.

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಜೈಲಿಗಟ್ಟಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ್ದ ಹತ್ರಾಸ್ ಎಸ್‌ಪಿ ವಿಕ್ರಾಂತ ವೀರ, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಕ್ಕೆ ಆಕೆಯ ದೇಹದಲ್ಲಿ ಯಾವುದೇ ಗುರುತುಗಳು ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದರು. ಆಕೆಯ ನಾಲಿಗೆಯನ್ನು ತುಂಡು ಮಾಡಲಾಗಿದೆ ಎಂಬ ವರದಿಗಳು ಕೂಡ ಸುಳ್ಳು ಎಂದು ಹೇಳಿದರು.

ಹತ್ರಾಸ್ ಅಥವಾ ಅಲಿಗಡದ ವೈದ್ಯರಾಗಲೀ ಲೈಂಗಿಕ ದೌರ್ಜನ್ಯ ನಡೆದ ಲಕ್ಷಣಗಳನ್ನು ದೃಢಪಡಿಸಿಲ್ಲ. ವಿಧಿವಿಜ್ಞಾನ ನೆರವಿನೊಂದಿಗೆ ವೈದ್ಯರು ಈ ವಿಷಯವನ್ನು ತನಿಖೆ ಮಾಡಿದ್ದಾರೆ. ಸಂತ್ರಸ್ತೆಯ ಖಾಸಗಿ ಅಂಗಗಳಲ್ಲಿ ಅತ್ಯಾಚಾರದ ಕುರುಹುಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದರು.

ಈ ವೇಳೆ ಹತ್ರಾಸ್‌ಗಾಗಲೀ ಅಥವಾ ಆಕೆಯ ಕುಟುಂಬಸ್ಥರನ್ನು ಭೇಟಿ ಮಾಡಲಾಗಲಿ ಪರ್ತಕರ್ತರಿಗೆ ನಿರ್ಬಂಧಿಸಲಾಗಿತ್ತು. ಈ ವೇಳೆ ಉತ್ತರ ಪ್ರದೇಶದ ಹತ್ರಾಸನಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು ಅವರು ಹತ್ರಾಸ್ ಗೆ ತೆರಳುತ್ತಿದ್ದರು. ಸಿದ್ದಿಕ್ ಸೇರಿದಂತೆ ಮೂವರನ್ನು ಹಾದಿ ಮಧ್ಯದಲ್ಲೆ ಪೊಲೀಸರು ಬಂಧಿಸಿದ್ದರು. ಸದ್ಯ ಕೇರಳ ಜೈಲಿನಲ್ಲಿರುವ ಪತ್ರಕರ್ತ ಸಿದ್ದಿಕ್ ಕಪ್ಪನ್ ಜಾಮೀನು ಕೋರಿ ಸುಪ್ರೀಂ ಕೋರ್ಟಗೆ ಅರ್ಜಿ ಸಲ್ಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.