ಬೆಳಗಾವಿ : ಕಳೆದ ವರ್ಷ ಪುನೀತ ರಾಜ ಕುಮಾರ ಅಕಾಲಿಕ ನಿಧನದಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗಿರಲಿಲ್ಲ, ಆದರೆ ಈ ವರ್ಷ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಣೆ ಮಾಡುವುದು ಶಾಸಕರಾದ ನಿಮ್ಮ ಜವಾಬ್ದಾರಿ. ಅಕಸ್ಮಾತ್ ನೀವು ಅದ್ಧೂರಿಯಾಗಿ ಆಚರಣೆ ಮಾಡಲು ಅವಕಾಶ ಮಾಡಿಕೊಡದಿದ್ರೆ ಬರುವ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಬೆಳಗಾವಿ ಶಾಸಕರಿಗೆ ಯುವ ಕನ್ನಡ ಹೋರಾಟಗಾರ ಸಂಪತ್‍ಕುಮಾರ ದೇಸಾಯಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲು ಕನ್ನಡ ಸಂಘಟನೆಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದರೆ ಡಾಲ್ಬಿ ಹಚ್ಚಲು ಜಿಲ್ಲಾಡಳಿತ ಅವಕಾಶ ನೀಡದೇ ಇರುವುದು ಮತ್ತು ಸ್ಥಳೀಯ ಶಾಸಕರು ರಾಜ್ಯೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸದೇ ಇರುವುದು ಕನ್ನಡ ಹೋರಾಟಗಾರರ ಆಕ್ಷೇಪಕ್ಕೆ ಕಾರಣವಾಗಿದೆ.
ಹೀಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕನ್ನಡ ಹೋರಾಟಗಾರರು ಡಾಲ್ಬಿ ಹಚ್ಚಲು ಅವಕಾಶ ನೀಡುವಂತೆ ಮತ್ತು ಸ್ಥಳೀಯ ಶಾಸಕರು ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆಯ ಜವಾಬ್ದಾರಿ ತೆಗೆದುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಕನ್ನಡ ಹೋರಾಟಗಾರ ಸಂಪತ್‍ಕುಮಾರ ದೇಸಾಯಿ ಅವರು, ಪ್ರತಿವರ್ಷ ನಾವು ಡಿಜೆ ಹಚ್ಚಿ ಅದ್ಧೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವು. ಆದರೆ ಈ ವರ್ಷ ನಮಗೆ ಸುಪ್ರೀಮ ಕೋರ್ಟ ಆದೇಶದ ನೆಪವನ್ನು ಹೇಳಲಾಗುತ್ತಿದೆ. ಆ ಕಾರಣಕ್ಕಾಗಿ ಎರಡೆರಡು ಡಾಲ್ಬಿಗಳನ್ನು ಮಾತ್ರ ಹಚ್ಚಬೇಕು. ಇಲ್ಲದಿದ್ರೆ ಗಾಡಿ ಜಪ್ತಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.
ಸುಪ್ರೀಮ ಕೋರ್ಟ ಆದೇಶಕ್ಕೆ ನಾವು ತಲೆ ಬಾಗುತ್ತೇವೆ. ಆದರೆ ಸುಪ್ರೀಮ ಕೋರ್ಟ ಆದೇಶವು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವಕ್ಕೆ ಮಾತ್ರ ಸಿಮೀತವಾಗಿದೆಯಾ.. ಗಣೇಶೋತ್ಸವ, ದಾಂಡಿಯಾ, ಶಿವಜಯಂತಿ, ವಾಲ್ಮೀಕಿ ಜಯಂತಿ, ಧಾರವಾಡದಲ್ಲಿ ಈದ್ ಮಿಲಾದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇಲ್ಲೆಲ್ಲಾ ಸುಪ್ರೀಮ ಕೋರ್ಟ ಆದೇಶ ಪಾಲನೆ ಆಗಿಲ್ಲ. ಆದರೆ ನಮ್ಮ ಕರ್ನಾಟಕ ರಾಜ್ಯೋತ್ಸವಕ್ಕೆ ಮಾತ್ರ ಇದು ಯಾಕೆ ಎಂದು ಪ್ರಶ್ನಿಸಿದರು.
ಗಣೇಶೋತ್ಸವದಲ್ಲಿ ಬೆಳಿಗ್ಗೆ 11 ಗಂಟೆಗೆ ವಿಸರ್ಜನೆ ಪ್ರಾರಂಭವಾಯಿತು ಎಂದರೆ ಮಾರನೇ ದಿನ ಸಂಜೆವರೆಗೂ ವಿಸರ್ಜನೆ ನಡೆಯುತ್ತದೆ. ಆ ವಿಸರ್ಜನೆ ಮುಗಿಯುವವರೆಗೂ ಇಲ್ಲಿನ ಶಾಸಕರು ಮುಂದೆ ನಿಂತುಕೊಂಡು ಅದ್ಧೂರಿಯಾಗಿ ಮುಗಿಸಿಕೊಡುತ್ತಾರೆ. ಆದರೆ ಬೆಳಗಾವಿಯಲ್ಲಿ ರಾಜ್ಯೋತ್ಸವ ಬಂದಾಗ ಇವರು ಯಾಕೆ ಮೌನ ವಹಿಸುತ್ತಾರೆ. ಗಣಪತಿ ಹಬ್ಬ ಬರುವುದಕ್ಕೆ ಒಂದು ತಿಂಗಳು ಮುಂಚೆ ಇರುವಾಗಲೇ ಇವರು ತಮ್ಮ ಆಫೀಸ್‍ನಲ್ಲಿ ಕುಳಿತು ಗಣೇಶೋತ್ಸವ ಹಾಗೆ ಮಾಡೋಣ, ಹೀಗೆ ಮಾಡೋಣ ಎಂದು ಹೇಳಿ ವಿಡಿಯೋ ಮಾಡುತ್ತಾರೆ. ರಾಜ್ಯೋತ್ಸವಕ್ಕೆ ಯಾಕೆ ಬರುವುದಿಲ್ಲ. ಎಲ್ಲಾ ಆಚರಣೆಯ ಸಭೆಗಳಿಗೆ ಇವರು ಹಾಜರಾಗುತ್ತಾರೆ, ನಮ್ಮ ಸಭೆಗಳಿಗೆ ಭಾಗವಹಿಸುವುದಿಲ್ಲ. ಕನ್ನಡಿಗರು ಏನು ತಪ್ಪು ಮಾಡಿದ್ದಾರೆ..ಕನ್ನಡಿಗರ ಮತ ಬೇಕು, ಕನ್ನಡಿಗರ ಮತದಿಂದ ಚುನಾವಣೆ ಗೆದ್ದು, ಬೆಳೆಯುತ್ತಿದ್ದಾರೆ. ಕನ್ನಡಿಗರ ಇಂತಹ ಪರಿಸ್ಥಿತಿ ಬಂದಾಗ ಕನ್ನಡಿಗರನ್ನು ಅನಾಥ ಮಾಡಿ ಕೈ ಬಿಟ್ಟು ಹೋಗುತ್ತಾರೆ ಎಂದು ಸಂಪತ್‍ಕುಮಾರ ದೇಸಾಯಿ ಕಿಡಿಕಾರಿದರು.
ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಣೆ ಮಾಡುವುದು ಬೆಳಗಾವಿಯ ಮೂರು ಶಾಸಕರ ಜವಾಬ್ದಾರಿಯಾಗಿದೆ. ಅಕಸ್ಮಾತ್ ನೀವು ಅದ್ಧೂರಿಯಾಗಿ ಆಚರಣೆ ಮಾಡಲು ಅವಕಾಶ ನೀಡದಿದ್ರೆ ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಒಬ್ಬೊಬ್ಬ ಕನ್ನಡಪರ ಹೋರಾಟಗಾರರನ್ನು ನಿಲ್ಲಿಸುತ್ತೇವೆ. ನಾವು ಸೋಲುತ್ತೇವೆ, ಗೆಲ್ಲುತ್ತೇವೆ ಎಂಬುದು ಮುಖ್ಯವಲ್ಲ. ಆದರೆ ನಿಮ್ಮನ್ನು ಸೋಲಿಸುವ ಪ್ರಯತ್ನ ಮಾಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಲಕ್ಷ್ಮೀ ಹೆಬ್ಬಾಳ್ಕರಗೆ ಸಂಪತ್‍ಕುಮಾರ ದೇಸಾಯಿ ಎಚ್ಚರಿಕೆ ನೀಡಿದರು.
ಈ ವೇಳೆ ಕನ್ನಡ ಹೋರಾಟಗಾರರಾದ ವಿನಾಯಕ ಬಳ್ಳಾರಿ, ಅನಿಲ ದಡ್ಡಿಮನಿ, ಶಿವು ದೇವರರ್ ಸೇರಿ ಇನ್ನಿತರರು ಉಪಸ್ಥಿತರಿದ್ದರು. ಒಟ್ಟಿನಲ್ಲಿ ಕನ್ನಡ ಹೋರಾಟಗಾರರು ಬೆಳಗಾವಿ ನಗರ ಹಾಗೂ ಗ್ರಾಮೀಣ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.