ನಿಪ್ಪಾಣಿ, 30: ಕರ್ನಾಟಕ ರಾಜ್ಯೋತ್ಸವ ಮಾಸಾಚರಣೆಯಲ್ಲೇ ಕರ್ನಾಟಕದಲ್ಲಿ ಕನ್ನಡಕ್ಕೆ ವಿರೋಧ ವ್ಯಕ್ತವಾಗಿದೆ. ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮದಲ್ಲಿ ಸರಕಾರಿ ಕನ್ನಡ ಶಾಲಾ ಕಟ್ಟಡ ನಿರ್ಮಿಸಲು ಕೆಲ ಮರಾಠಿಗರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದು ಇದು ಕನ್ನಡ, ಮರಾಠಿ ಭಾಷಿಕರ ಮಧ್ಯೆ ಮತ್ತೊಂದು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಕಾರದಗಾ ಗ್ರಾಮದಲ್ಲಿ ಕೆಲವು ಮರಾಠಿ ಭಾಷಾ ಪ್ರೇಮಿಗಳು ನಾಡ ವಿರೋಧಿ ಕೃತ್ಯ ಎಸಗಿದ್ದು ಸದ್ಯ ಕನ್ನಡಿಗರ ಹೋರಾಟಕ್ಕೆ ಆಸ್ಪದವಾಗಿದೆ. ಕಾರದಗಾ ಗ್ರಾಮದಲ್ಲಿನ 50 ವರ್ಷಕ್ಕೂ ಹಳೆಯದಾದ ಸರ್ಕಾರಿ ಕನ್ನಡ ಶಾಲೆಯ ಕೊಠಡಿ ನೆಲಸಮ ಮಾಡಿ ಹೊಸ ಕೊಠಡಿ ನಿರ್ಮಾಣಕ್ಕೆ ಶಾಲೆಯ ಆಡಳಿತ ಸಮಿತಿ ಮುಂದಾಗಿತ್ತು. ಈ ಸಂದರ್ಭದಲ್ಲಿ ಅದೇ ಗ್ರಾಮದ ಮರಾಠಿ ಶಾಲೆಯ ಎಸ್ಡಿಎಂಸಿ ಸದಸ್ಯರು ಭೂಮಿ ಪೂಜೆ ವೇಳೆ ಗಲಾಟೆ ಮಾಡಿದ್ದಾರೆ.
ಕೆಲ ವರ್ಷಗಳ ಹಿಂದೆ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಗ್ರಾಮದ ಹಳೆಯ ಸರ್ಕಾರಿ ಮರಾಠಿ ಶಾಲಾ ಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರಿಸಲಾಗಿತ್ತು. ಕ್ರಮೇಣ ಕನ್ನಡ ಕಲಿಯುವ ಮಕ್ಕಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಮೊದಲು ಮೀಸಲಿದ್ದ ಜಾಗದಲ್ಲಿ ಹಳೆ ಕನ್ನಡ ಶಾಲೆಯ ಕೊಠಡಿ ಕೆಡವಿ ನೂತನ ಶಾಲಾ ಕೊಠಡಿ ಕಟ್ಟಲು ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮನವಿ ಮಾಡಿ ಗ್ರಾಮಸ್ಥರು ಅನುಮತಿ ಪಡೆದಿದ್ದರು.
2022 ರ ಡಿಸೆಂಬರ್ 27ರಂದು ಶಿಕ್ಷಣ ಇಲಾಖೆ ಅನುಮತಿ ಅನ್ವಯ ಇದೆ ನವೆಂಬರ್ 16ರಂದು ಕೊಠಡಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 11 ಲಕ್ಷ 98 ಸಾವಿರ ರೂಪಾಯಿ ಅನುದಾನ ಮಂಜೂರಾಗಿತ್ತು. ಬಳಿಕ ಕಾರದಗಾ ಗ್ರಾಮ ಪಂಚಾಯತಿ ಕಚೇರಿಯಿಂದ ಎನ್ಓಸಿ ಪಡೆದಿದ್ದ ಗ್ರಾಮಸ್ಥರು ಬುಧವಾರ ಹೊಸ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ಸಿದ್ಧತೆ ಕೈಗೊಂಡಿದ್ದರು.
ಕನ್ನಡ ಮಾಧ್ಯಮ ಶಾಲೆಯ ನೂತನ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆಗೆ ಮುಂದಾದ ಸಂದರ್ಭದಲ್ಲಿ ಕಾರದಗಾ ಗ್ರಾಮದ ಸರ್ಕಾರಿ ಮರಾಠಿ ಶಾಲೆಯ ಎಸ್ ಡಿಎಂಸಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು..