ಬೆಳಗಾವಿ : ಬೆಳಗಾವಿಯಲ್ಲಿರುವ ಮಹಾರಾಷ್ಟ್ರವಾದಿಗಳೊಂದಿಗೆ ಸಮಾಲೋಚಿಸಲು ಮಹಾರಾಷ್ಟ್ರ ಸರಕಾರ ಡಿ 3 ರಂದು ಬೆಳಗಾವಿಗೆ ಕಳುಹಿಸಲಿದೆ. ಇದರಿಂದ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಬೆಳಗಾವಿ ಸೇರಿದಂತೆ ಗಡಿಯಲ್ಲಿ ಉದ್ವಿಗ್ನ ವಾತಾವರಣವುಂಟಾಗುವ ಸಾಧ್ಯತೆಯಿದ್ದು ಸರಕಾರ ಮಹಾರಾಷ್ಟ್ರದ ಸಚಿವರಿಗೆ ರಾಜ್ಯ ಪ್ರವೇಶಿಸಲು ಅನುಮತಿ ನೀಡಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಸರಕಾರವನ್ನು ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾಧ್ಯಕ್ಷ ದೀಪಕ ಗುಡುಗನಟ್ಟಿ, ಮಹಾರಾಷ್ಟ್ರ ಸಚಿವರ ರಾಜ್ಯಕ್ಕೆ ನೀಡುತ್ತಿರುವ ಭೆಟ್ಟಿ ಅಧಿಕೃತ ಅಥವಾ ಅನಧಿಕೃತವಾಗಿದ್ದರೂ ಸರಕಾರ ಪ್ರೊಟೋಕಾಲ್ ಕಾರಣದಿಂದ ಅನುಮತಿ ನೀಡಬಾರದು. ಅವರ ಭೆಟ್ಟಿ ರಾಜ್ಯದ ಹಿತಾಸಕ್ತಿಗೆ ವ್ಯತಿರಿಕ್ತವಾಗಿರುವದರಿಂದ ಅನುಮತಿ ಕೊಡದಿರುವದೇ ಸೂಕ್ತ. ಒಂದು ವೇಳೆ ಅನುಮತಿ ನೀಡಿದರೆ ಕರವೇ ಅವರ ಸಭೆಗೇ ನುಗ್ಗುಲಿದೆ. ಮುಂದಾಗುವದಕ್ಕೆಲ್ಲ ಸರಕಾರವೇ ಕಾರಣವಾಗಲಿದೆ ಎಂದಿದ್ದಾರೆ.
ಅಲ್ಲದೇ ಡಿ 19ರಿಂದ ಹತ್ತು ದಿನ ಬೆಳಗಾವಿಯಲ್ಲಿ ವಿಧಾನ ಮಂಡಳ ಅಧಿವೇಶನ ನಡೆಯಲಿದೆ. ಅಧಿವೇಶನದ ಮೊದಲ ದಿನ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಪರ್ಯಾಯವಾಗಿ ಪ್ರತಿಭಟನಾ ಪ್ರತಿಭಟಾನಾರ್ಥ ‘ಮಹಾಮೇಳಾವ’ ಸಭೆ ಆಯೋಜಿಸಲಿವೆ. ಪ್ರತಿ ವರುಷ ಕನ್ನಡ ಸಂಘಟನೆಗಳು ಅನುಮತಿ ಕೊಡಬೇಡಿ ಎಂದು ಆಗ್ರಹಿಸುತ್ತದೆ, ಆದರೆ ಕೊನೆ ಘಳಿಗೆಯಲ್ಲಿ ಸರಕಾರ ಅನುಮತಿ ನೀಡಿ ನಾಡ ವಿರೋಧಿಗಳನ್ನು ಉತ್ತೇಜಿಸುತ್ತಿದೆ. ಈ ಬಾರಿಯಾದರೂ ರಾಜ್ಯದ ಹಿತಾಸಕ್ತಿಗಾಗಿ ನಿಮ್ಮ ರಾಜಕೀಯ ಹಿತ ಬದಿಗಿಟ್ಟು ಅನುಮತಿ ಕೊಡಬೇಡಿ ಎಂದು ಕರವೇ ಆಗ್ರಹಿಸಿದೆ.