ಕಲಬುರಗಿ, ಅ.5: ರಾಜ್ಯ ಸರಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹ ಜ್ಯೋತಿ’ ಯೋಜನೆಗೆ ಶನಿವಾರ ಕಲಬುರಗಿಯ ಎನ್.ವಿ.ಕಾಲೇಜು ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ಹಾಗೂ ಪ್ರಧಾನಿ ಮೋದಿಗೆ ತಾಕತ್ತಿದ್ದರೆ ನಾವು ಜಾರಿಗೊಳಿಸಿರುವಂತಹ ಐದು ಗ್ಯಾರಂಟಿಗಳನ್ನು ಇಡೀ ದೇಶದ ಎಲ್ಲ ರಾಜ್ಯಗಳಲ್ಲಿ ಜಾರಿ ಮಾಡುವ ತೀರ್ಮಾನವನ್ನು ಮಾಡಲಿ ‘ ಎಂದು ಸವಾಲು ಹಾಕಿದರು.
ಬಿಜೆಪಿಯವರು ಗುಜರಾತ್ ಮಾಡೆಲ್ ಎಂದು ದೇಶದ ಜನರಿಗೆ ಭ್ರಮೆ ಹುಟ್ಟಿಸಿದ್ದರು. ಆದರೆ, ನಮ್ಮ ರಾಜ್ಯವನ್ನು ಗುಜರಾತ್ ಮಾಡಲು ಬಿಡುವುದಿಲ್ಲ. ನಮ್ಮದೇ ಆದ ‘ಕರ್ನಾಟಕ ಮಾಡೆಲ್ ಮಾಡಿದ್ದೇವೆ. ನುಡಿದಂತೆ ನಡೆಯುವುದೇ ಕರ್ನಾಟಕ ಮಾಡೆಲ್ ಎಂದು ಹೇಳಿದರು.
ನಾವು ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಲ್ಲಿ ಭರವಸೆಗಳನ್ನು ಈಡೇರಿಸಿದ್ದೇವೆ. ಅದಕ್ಕೆ ಪೂರಕವಾಗಿ ಬಜೆಟ್‍ನಲ್ಲಿ ಅನುದಾನವನ್ನೂ ಘೋಷಿಸಿದ್ದೇವೆ. ಪ್ರಧಾನಿ ಮೋದಿ ಹೇಳಿರುವಂತೆ, ಯೋಜನೆಗಳನ್ನು ಜಾರಿ ತಂದು ನಾವು ದಿವಾಳಿ ಆಗುವುದಿಲ್ಲ. ಹಿಂದೆ ಬಿಜೆಪಿ ಆಡಳಿತವಿದ್ದಾಗ ರಾಜ್ಯ ದಿವಾಳಿ ಆಗಿ, ನಿರುದ್ಯೋಗ ಸಮಸ್ಯೆ ಹೆಚ್ಚಿತ್ತು ಎಂದರು.
ಗೃಹಜ್ಯೋತಿ ಯೋಜನೆಯಡಿ 2.14 ಕೋಟಿ ಜನ ಲಾಭ ಪಡೆಯಲಿದ್ದು, ಈಗಾಗಲೆ 1.41 ಕೋಟಿ ಜನರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಜುಲೈ ಒಂದರಿಂದ ಈ ಯೋಜನೆ ಪ್ರಾರಂಭವಾಗಿದೆ. ಆಗಸ್ಟ್ ತಿಂಗಳಿನಿಂದ ಗೃಹ ಬಳಕೆಯ ವಿದ್ಯುತ್‍ಗೆ ಶೂನ್ಯ ಬಿಲ್ಲು ಬರುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ಜೂ.11ರಂದು ಜಾರಿಗೊಳಿಸಿದ ‘ಶಕ್ತಿ’ ಯೋಜನೆಯ ಲಾಭವನ್ನು ಇದುವರೆಗೂ 30 ಕೋಟಿಗೂ ಹೆಚ್ಚು ಜನ ಮಹಿಳೆಯರು ಪಡೆದಿದ್ದಾರೆ. ಪ್ರತಿದಿನ ಸುಮಾರು 50 ಲಕ್ಷ ಮಹಿಳೆಯರು ಉಚಿತವಾಗಿ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಯೋಜನೆಯಿಂದ ರಾಜ್ಯದ ಮಹಿಳೆಯರು ಸಂತುಷ್ಟರಾಗಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಗೆ ಆ.24 ರಂದು ಚಾಲನೆ ನೀಡಲಿದ್ದೇವೆ. ರಾಜ್ಯದ 1.28 ಕೋಟಿ ಕುಟುಂಬಗಳಿಗೆ 2 ಸಾವಿರ ರೂ.ಗಳನ್ನು ಈ ಯೋಜನೆಯಡಿ ನೀಡಲಾಗುವುದು. ನಾವು ಜನರ ಕೈಗೆ ದುಡ್ಡು ನೀಡುತ್ತಿದ್ದೇವೆ. ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ತನ್ಮೂಲಕ ರಾಜ್ಯದ ಜಿಡಿಪಿ, ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ. ಐದು ಗ್ಯಾರಂಟಿಗಳಿಂದ ಒಂದು ಕುಟುಂಬಕ್ಕೆ ಪ್ರತಿ ತಿಂಗಳು 4 ರಿಂದ 5 ಸಾವಿರ ರೂ. ದೊರೆಯಲಿದ್ದು, ಈ ರೀತಿ ವಾರ್ಷಿಕವಾಗಿ 48 ರಿಂದ 60 ಸಾವಿರ ರೂ. ಲಭಿಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಚಿವ ಕೆ.ಜೆ.ಜಾರ್ಜ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಗೃಹಜ್ಯೋತಿ ಯೋಜನೆ ನೋಂದಣಿಗೆ ಅಂತಿಮ ದಿನಾಂಕ ಇಲ್ಲ ಎಂದು ಹೇಳಿದರು. ರಾಹುಲ್ ಗಾಂಧಿ ಕರ್ನಾಟಕದಲ್ಲೂ ಜೋಡೋ ಯಾತ್ರೆ ಮಾಡಿದ್ದರು. ಭಾರತ ಜೋಡೋ ಯಾತ್ರೆ ವೇಳೆ ಸಾಮಾನ್ಯ ಜನರ ಜೊತೆ ಚರ್ಚೆ ಮಾಡಿ ಅವರ ಸಮಸ್ಯೆ ಅರಿತುಕೊಂಡಿದ್ದರು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮಧ್ಯಮ ವರ್ಗದವರು ಸಂಕಷ್ಟದಲ್ಲಿದ್ದಾರೆ. ಅವರ ಕೈ ಬಲಪಡಿಸಬೇಕು ಎಂದು ಹೇಳಿದ್ದರು. ಅವರ ಸೂಚನೆ ಮೇರೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು ಎಂದು ಅವರು ಹೇಳಿದರು.
ಒಂದು ಕೋಟಿ 42 ಲಕ್ಷ ಜನರು ಗೃಹಜೋತಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಗೃಹಜೋತಿ ನೋಂದಣಿಗೆ ಕಡೆಯ ದಿನಾಂಕವೆಂದೇನೂ ಇಲ್ಲ. ಉಚಿತವಾಗಿ ನೀಡುವುದು ಉಡುಗೊರೆಯಲ್ಲ. ಬದಲಾಗಿ ಜನರ ಆರ್ಥಿಕ ಸ್ಥಿತಿ ಸುಧಾರಿಸವ ಪ್ರಯತ್ನವಾಗಿದೆ. ಸಾಮಾನ್ಯ ಜನರಿಗೆ ಹಣ ಉಳಿದರೆ, ಅವರು ಬೇರೆ ರೂಪದಲ್ಲಿ ಹಣ ಖರ್ಚು ಮಾಡುತ್ತಾರೆ. ಇದರಿಂದ ಸರ್ಕಾರಕ್ಕೆ ಮತ್ತೆ ತೆರಿಗೆ ಬರಲಿದೆ. ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಕೈ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಹಾಗೆಯೇ ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂಡಾ ಗೆಲ್ಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಈಶ್ವರ್ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ರಹೀಮ ಖಾನ್, ಶಾಸಕಿ ಕನೀಝ್ ಫಾತಿಮಾ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ರಾಜ್ಯ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.