ಬಾಗೇಪಲ್ಲಿ: ಕರ್ನಾಟಕವು ಆರ್‌ಎಸ್‌ಎಸ್ ಪ್ರಯೋಗಶಾಲೆ ಆಗಿದ್ದು ರಾಜ್ಯದಲ್ಲಿ ಶಾಂತಿ, ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸವನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಮಾಡುತ್ತಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದ ಸಿಪಿಎಂ ರಾಜಕೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಕಾರಣಕ್ಕಾಗಿ ಸಂಘ ಸಿದ್ಧಾಂತವನ್ನು ಉತ್ತೇಜಿಸುವ ಶಾಲಾ ಪಠ್ಯಪುಸ್ತಕಗಳನ್ನು ರಾಜ್ಯದಲ್ಲಿ ಮುದ್ರಿಸಲಾಗಿದೆ ಎಂದರು.
ಇವಿ ರಾಮಸಾಮಿ ಪೆರಿಯಾರ್ ಅವರನ್ನು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಹೊರಗಿಟ್ಟಿರುವ ಕುರಿತು ದೊಡ್ಡ ವಿವಾದವೇ ಭುಗಿಲೆದ್ದಿದ್ದು ಆರ್‌ಎಸ್‌ಎಸ್ ಸ್ಥಾಪಕ ಬಲಿರಾಮ ಹೆಡಗೇವಾರ ಭಾಷಣವನ್ನು ಕರ್ನಾಟಕದಲ್ಲಿ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ. ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ ಅವರ ವಿಚಾರಗಳನ್ನು ಅಪ್ರಸ್ತುತಗೊಳಿಸಲಾಗಿದೆ. ಪ್ರಗತಿಪರ ವಿಚಾರಗಳನ್ನು ಪಠ್ಯ ಪುಸ್ತಕಗಳಿಂದ ಹೊರಗಿಟ್ಟು ಕೇಸರೀಕರಣಗೊಳಿಸಲಾಗಿದೆ ಎಂದು ಹೇಳಿದರು.
2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಅಲ್ಪಸಂಖ್ಯಾತರ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ. ಮುಸ್ಲಿಮರ ವಿರುದ್ಧ ಅನಗತ್ಯವಾದ ಪದೇ ಪದೇ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. ಲವ್ ಜಿಹಾದ್ ಸೇರಿದಂತೆ ಹಲವು ಸುಳ್ಳುಗಳು ಆರ್‌ಎಸ್‌ಎಸ್ ಕಾರ್ಖಾನೆಯಿಂದ ಉತ್ಪಾದನೆ ಆಗುತ್ತಲೇ ಇವೆ ಎಂದು ಕೇರಳ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು.
ಭಾರತೀಯ ಕಮ್ಯುನಿಸ್ಟ ಪಕ್ಷ(ಎಂ) ಮಾತ್ರ ರಾಷ್ಟ್ರವನ್ನು ಬೆಳವಣಿಗೆಯ ಹಾದಿಯಲ್ಲಿ ಕೊಂಡೊಯ್ಯಬಲ್ಲದು ಮತ್ತು ನಮ್ಮ ಪಕ್ಷ ಮಾತ್ರ ಬಿಜೆಪಿ ಮತ್ತು ಸಂಘ ಪರಿವಾರವನ್ನು ಬದಿಗೊತ್ತಬಹುದು ಎಂದರು.
ಕೇರಳದಲ್ಲಿ ಸಿಪಿಐ(ಎಂ) ಧರ್ಮ ರಾಜಕಾರಣವನ್ನು ಕೊನೆಗೊಳಿಸಿದರೆ ಕರ್ನಾಟಕದಲ್ಲಿ ಅದಕ್ಕೆ ವಿರುದ್ಧವಾಗಿ ಧರ್ಮ ರಾಜಕಾರಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ವಿಜಯನ್ ಹೇಳಿದರು.